ಸಿನಿಮಾ ಹೆಸರೇ ‘ಚಟ್ಟ’?; ನೀವಂದುಕೊಂಡ ಅರ್ಥವಲ್ಲ ಎಂದ ನಿರ್ದೇಶಕ

Untitled design (39)
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಪ್ರತಿವಾರ ಹಲವಾರು ಸಿನಿಮಾಗಳು ತೆರೆ ಮೇಲೆ ಹಾಜರಾಗುವ ಮುಖೇನ ಸಿನಿಪ್ರೇಕ್ಷಕರನ್ನು ಮನರಂಜಿಸುವಲ್ಲಿ ಮುಂಚೂಣಿಯಲ್ಲಿದೆ. ಈ ಪೈಕಿ ಹೊಸಬರ ಚಿತ್ರಗಳಿಂದ ಹಿಡಿದು ಸ್ಟಾರ್​ ನಟರ ಸಿನಿಮಾಗಳು ಮಾಧ್ಯಮಗಳಲ್ಲಿ ಮತ್ತು ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ. ಮೊದಲಿಗೆ ಚಿತ್ರಪ್ರೇಮಿಗಳನ್ನು ಸೆಳೆಯುವುದೇ ಚಿತ್ರದ ಶೀರ್ಷಿಕೆ! ಈ ಸಾಲಿಗೆ ಇಲ್ಲೊಂದು ಹೊಸಬರ ತಂಡ ಸೇರ್ಪಡೆಗೊಂಡಿದ್ದು, 'ಚಟ್ಟ' ಎಂಬ ಟೈಟಲ್​ನಿಂದಲೇ ಅನೇಕರ ಗಮನ ಸೆಳೆದಿದೆ.

ಇತ್ತೀಚಿನ ದಿನಗಳಲ್ಲಿ ಬಗೆಬಗೆಯ ಶೀರ್ಷಿಕೆಗಳ ಮೂಲಕವೇ ಸಿನಿಮಾಗಳು ಸೆಟ್ಟೇರುತ್ತಿವೆ. ಇದೀಗ ಅಂಥದ್ದೇ ವಿಭಿನ್ನ ಸಿನಿಮಾ ಮೂಲಕ ಗಮನ ಸೆಳೆಯುತ್ತಿದೆ ‘ಚಟ್ಟ’ ಚಿತ್ರ. ಹೀಗೊಂದು ವಿಭಿನ್ನ ಶೀರ್ಷಿಕೆ ಮೂಲಕ ಹೊಸತನದ ಕಥಾಹಂದರವನ್ನು ಚಿತ್ರರಸಿಕರಿಗೆ ಉಣಬಡಿಸಲು ಸಜ್ಜಾಗ್ತಿರುವುದು ನಿರ್ದೇಶಕ ಭಾನು ಪ್ರಕಾಶ್. ಸಹ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅವರೀಗ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನದ ಅಖಾಡಕ್ಕೆ ಧುಮುಕಿದ್ದಾರೆ.

‘ಕೇರ್ ಆಫ್ ಫುಟ್ಬಾತ್’ ಸೇರಿದಂತೆ ಒಂದಷ್ಟು ಕನ್ನಡ ಹಾಗೂ ತೆಲುಗು ಇಂಡಸ್ಟ್ರೀಯಲ್ಲಿಯೂ ನಿರ್ದೇಶನದ ಪಟ್ಟುಗಳನ್ನು ಕಲಿತುಕೊಂಡಿರುವ ಭಾನು ಪ್ರಕಾಶ್, ಈ ಭರವಸೆಯೊಂದಿಗೆ 'ಚಟ್ಟ' ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೆಟ್ ಹಾಕಿ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಮಾಡಲಾಗಿದೆ.

ಕವಿರತ್ನ ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕ ಜೋಸೈಮನ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಿ ಭಾನು ಪ್ರಕಾಶ್ ಹೊಸ ಕನಸಿಗೆ ಜೊತೆಯಾದರು. ಈ ವೇಳೆ ನಿರ್ದೇಶಕ ಭಾನು ಪ್ರಕಾಶ್ ಮಾತನಾಡಿ, "ಚಟ್ಟ ಎಂದರೆ ನಾವು ಅಂದುಕೊಂಡಂತೆ ಎತ್ತಿಕೊಂಡು ಹೋಗುವುದಲ್ಲ. ಲೋಕದಲ್ಲಿಯೂ ಪುಸ್ತಕ. ಆ ಪುಸ್ತಕದ ಕೊನೆಯ ಪೇಜ್ ಸಿನಿಮಾ. ನನಗೆ ಆಶೀರ್ವಾದ ಮಾಡಲು ಬಂದವರಿಗೆ ಧನ್ಯವಾದ. ನಮ್ಮದು ಪ್ಯಾನ್ ಇಂಡಿಯಾ ಸಿನಿಮಾ" ಎಂದರು.

ಕೆ.ಎಂ ಕ್ರಿಯೇಷನ್ಸ್ ನಿರ್ಮಾಣದ ಚಟ್ಟ ಸಿನಿಮಾವನ್ನು ಕುಮಾರ್ ಎಂ, ಅಣಜಿ ರಮೇಶ್, ಡಿ.ಒಬಲ್ ರೆಡ್ಡಿ, ಕುಮಾರ್ .ಎಂ ನಿರ್ಮಾಣ ಮಾಡುತ್ತಿದ್ದಾರೆ. ಕೆ. ರಾಮ್ ಮೂರ್ತಿ, ವಾಸುದೇವನ್, ಪ್ರಕಾಶ್ ಗೌಡ ಸಹ ಪ್ರೊಡ್ಯೂಸರ್ ಆಗಿ, ಮುರಳಿ ಕೃಷ್ಣ ಸಿ.ಎಚ್. ಉತನೂರೂಪ್ಪ ಎಕ್ಸಿ ಕ್ಯೂಟಿವ್ ಪ್ರೊಡ್ಯೂಸರ್ ಆಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಿಸ್ಟ್ರೀ ಡ್ರಾಮಾ ಕಥಾಹಂದರ ಹೊಂದಿರುವ 'ಚಟ್ಟ' ಫೆಬ್ರವರಿಯಿಂದ ಶೂಟಿಂಗ್ ಪ್ರಾರಂಭಿಸಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net