

ಮುಂಬೈ: ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ದೀಖಿ ಮತ್ತು ಕನ್ನಡದ ರಿಷಭ್ ಶೆಟ್ಟಿ ಭೇಟಿಯಾಗಿದ್ದು, ರಿಷಭ್ ಕಂಡರೆ ತಮಗೆ ಹೊಟ್ಟೆಕಿಚ್ಚು ಎಂದು ನವಾಜುದ್ದೀನ್ ಹೇಳಿಕೊಂಡಿದ್ದು ವರದಿಯಾಗಿದೆ. ನವಾಜುದ್ದೀನ್ ಮತ್ತು ರಿಷಭ್ ಬೇಟಿ ಇಷ್ಟಕ್ಕೇ ಮುಗಿದಿಲ್ಲ. ರಿಷಭ್ ಅವರನ್ನು ತಮ್ಮ ಮೆನೆಗೆ ಕರೆದುಕೊಂಡು ಹೋಗಿರುವ ನವಾಜುದ್ದೀನ್ ಅಲ್ಲಿ ಸತ್ಕಾರ ಮಾಡುವುದರ ಜತೆಗೆ ರಂಗಭೂಮಿ, ಸಿನಿಮಾ, ನಟನೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ.
ಹೌದು, ಮುಂಬೈನ ಸಂವಾದದಲ್ಲಿ ಭಾಗವಹಿಸಿದ್ದ ರಿಷಭ್ ಶೆಟ್ಟಿ, ಪ್ರಮೋದ್ ಶೆಟ್ಟಿ ಮುಂತಾದವರನ್ನು ನವಾಜುದ್ದೀನ್ ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ಅಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ಮಾಡಿದ್ದಾರೆ. ನವಾಜುದ್ದೀನ್ ಮನೆಯಲ್ಲಿ ತಾವಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ರಿಷಭ್, ಅದಕ್ಕೆ ನವಾಜುದ್ದೀನ್ಗೆ ಧನ್ಯವಾದ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಅವರು ತಮ್ಮ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನವಾಜುದ್ದೀನ್ ಸಿದ್ದೀಕಿ, 'ಈ ಚರ್ಚೆ ಇನ್ನೂ ಮುಗಿದಿಲ್ಲ. ಸದ್ಯದಲ್ಲೇ ಇನ್ನಷ್ಟು ಮುಂದುವರೆಯಲಿದೆ' ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ತಮ್ಮ ಮತ್ತು ರಿಷಭ್ ಅವರ ಭೇಟಿ ಮತ್ತು ಗೆಳೆತನ ಇಷ್ಟಕ್ಕೇ ಮುಗಿದಿಲ್ಲ, ಇನ್ನೂ ಮುಂದುವರೆಯಲಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.
ಇದಕ್ಕೂ ಮುನ್ನ ಸಂವಾದದಲ್ಲಿ ರಿಷಭ್ ಕುರಿತು ಮಾತನಾಡಿದ್ದ ನವಾಜುದ್ದೀನ್, 'ಅವರನ್ನು ನೋಡಿದರೆ ನಿಜಕ್ಕೂ ಹೊಟ್ಟೆಕಿಚ್ಚು ಆಗುತ್ತದೆ. ಇದು ಕೆಟ್ಟ ರೀತಿಯ ಹೊಟ್ಟೆಕಿಚ್ಚು ಅಲ್ಲ. ಆತ ಅಂತಹ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಈ ರೀತಿಯ ಹೊಟ್ಟೆ ಕಿಚ್ಚು ನಿಮ್ಮನ್ನು ಕಾಲ್ಬೆರಳುಗಳ ಮೇಲೆ ನಿಲ್ಲುವಂತೆ ಮಾಡುತ್ತದೆ ಮತ್ತು ಪರಿಶ್ರಮ ಪಡುವಂತೆ ಹುರಿದುಂಬಿಸುತ್ತದೆ' ಎಂದು ಹೇಳಿದ್ದರು.