'ಪ್ರಜೆಯೇ ಪ್ರಭು' ಎನ್ನುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ …

Prajaye Prabhu - Priyanka Upendra
Published on

ಬೆಂಗಳೂರು: ಪ್ರಿಯಾಂಕಾ ಉಪೇಂದ್ರ ಸಿನಿಮಾ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ 'ಉಗ್ರಾವತಾರ' ಮತ್ತು 'ಲೈಫ್​ ಈಸ್​ ಬ್ಯೂಟಿಫುಲ್​' ಚಿತ್ರಗಳನ್ನು ಮುಗಿಸಿರುವ ಅವರು ಆ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇದಲ್ಲೆ 'ಖೈಮರ', 'ಕರ್ತ ಕರ್ಮ ಕ್ರಿಯಾ', 'ಡಿಟೆಕ್ಟಿವ್​ ತೀಕ್ಷ್ಣ' ಮುಂತಾದ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಈ ಮಧ್ಯೆ, ಅವರು ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ಪ್ರಿಯಾಂಕಾ ಉಪೇಂದ್ರ ಗ್ರೀನ್​ ಸಿಗ್ನಲ್​ ನೀಡಿರುವ ಹೊಸ ಚಿತ್ರದ ಹೆಸರು 'ಪ್ರಜೆಯೇ ಪ್ರಭು' ಎಂದು. ಹೆಸರು ಕೇಳುತ್ತಿದ್ದಂತೆಯೇ ಇದೊಂದು ಪಕ್ಕಾ ರಾಜಕೀಯ ಚಿತ್ರ ಎಂಬುದು ಸ್ಪಷ್ಟವಾಗುತ್ತದೆ. ಈ ಚಿತ್ರದಲ್ಲಿ ಪ್ರಿಯಾಂಕಾ ಮೊದಲ ಬಾರಿಗೆ ರಾಜಕಾರಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ರಾಜಕಾರಣಿಯಾಗಿ ಅವರು ಏನೆಲ್ಲಾ ಮಾಡುತ್ತಾರೆ ಮತ್ತು ಪ್ರಜೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂಬ ವಿಷಯ ಇನ್ನಷ್ಟೇ ಗೊತ್ತಾಗಬೇಕಿದೆ.

ಈ ಚಿತ್ರವನ್ನು ನಿರ್ದೇಶಿಸುತ್ತರುವುದು ಸಾಯಿಲಕ್ಷ್ಮಣ್​. ಇದಕ್ಕೂ ಮುನ್ನ ಹಲವು ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ ದುಡಿದಿರುವ ಅವರು, ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿಯುತ್ತಿದ್ದಾರೆ. ಮೊದಲ ಚಿತ್ರದಲ್ಲೇ ಗಂಭೀರವಾದ ವಸ್ತುವೊಂದನ್ನು ಅವರು ತೆಗೆದುಕೊಂಡಿದ್ದು, ಚಿತ್ರ ಸದ್ಯದಲ್ಲೇ ಪ್ರಾರಂಭವಾಗಲಿದೆ.

ಇನ್ನು, 2023ರ ಮೊದಲ ಚಿತ್ರವಾಗಿ ಪ್ರಿಯಾಂಕಾ ಉಪೇಂದ್ರ ಅಭಿನಯದ 'ಮಿಸ್​ ನಂದಿನಿ' ಬಿಡುಗಡೆಯಾಗಲಿದೆ. ಜನವರಿ 06ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಗುತ್ತಿದ್ದು, ಸದ್ಯದಲ್ಲೇ ಈ ಚಿತ್ರದ ಪ್ರಚಾರದ ಕೆಲಸಗಳಲ್ಲಿ ಪ್ರಿಯಾಂಕಾ ಭಾಗವಹಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net