ರಿಯಾ ಜಾಮೀನು ಅರ್ಜಿ ವಜಾ ... ಅಕ್ಟೋಬರ್​ 06ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Rhea-Chakraborty-Final-1-2
Published on

ಮುಂಬೈ: ರಿಯಾ ಚಕ್ರವರ್ತಿ ಅವರ 14 ದಿನಗಳ ನ್ಯಾಯಾಂಗ ಬಂಧನ ಇಂದಿಗೆ ಅಂತ್ಯವಾಗಬೇಕಿತ್ತು. ಆದರೆ, ಮುಂಬೈ ಹೈಕೋರ್ಟ್​ ಅವರ ಜಾಮೀನು ಅರ್ಜಾ ವಜಾ ಮಾಡಿದ ಹಿನ್ನೆಲೆಯಲ್ಲಿ ರಿಯಾದ ಅವರ ಬಂಧನ ಅಕ್ಟೋಬರ್​ 06ರವರೆಗೂ ಮುಂದುವರೆದಿದೆ.

ಇದಕ್ಕೂ ಮುನ್ನ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದಲ್ಲಿ ಡ್ರಗ್ಸ್​​ ಬಳಕೆಯಾಗಿದೆ ಎಂಬ ವಿಷಯದಲ್ಲಿ ತನಿಖೆ ನಡೆಸುತ್ತಿದ್ದ ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು, ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೌವಿಕ್​ ಚಕ್ರವರ್ತಿ ಅವರನ್ನು ಕೆಲವು ದಿನಗಳ ಹಿಂದೆ ಬಂಧಿಸಿದ್ದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ತಮಗೆ ಜಾಮೀನು ಸಿಗಬೇಕು ಎಂದು ರಿಯಾ ಅರ್ಜಿ ಸಲ್ಲಿಸಿದ್ದು, ಆ ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ ನಡೆಯಿತು. ಈ ಪ್ರಕರಣದಲ್ಲಿ ರಿಯಾ ಅವರನ್ನು ಹೊರಗೆ ಬಿಟ್ಟರೆ, ಪ್ರಮುಖವಾದ ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ವಕೀಲರು ಮನವಿ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮುಂಬೈ ಹೈ ಕೋರ್ಟ್​, ರಿಯಾ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿ, ಅವರನ್ನು ಅಕ್ಟೋಬರ್​ 06ರವರೆಗೂ ನ್ಯಾಯಾಂಗ ಬಂಧನದಲ್ಲಿ ಮುಂದುವರೆಸಿದೆ.

ಡ್ರಗ್ಸ್​ ವಿಚಾರದಲ್ಲಿ ರಿಯಾ ಅವರಿಂದ ಎನ್​ಸಿಬಿ ಅಧಿಕಾರಿಗಳು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ನಟ-ನಟಿಯರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಬರೀ ಸುಶಾಂತ್​ ಅಷ್ಟೇ ಅಲ್ಲ, ಬಾಲಿವುಡ್​ನಲ್ಲಿ 25ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಡ್ರಗ್ಸ್​ ಅಭ್ಯಾಸವಿದೆ ಮತ್ತು ಪಾರ್ಟಿಗಳಲ್ಲಿ ಅವರೆಲ್ಲಾ ಡ್ರಗ್ಸ್​ ತೆಗೆದುಕೊಳ್ಳುತ್ತಾರೆ ಎಂದು ರಿಯಾ ಹೇಳಿದ್ದು, ಈ ವಿಷಯವಾಗಿ ಅವರು ಹೇಳಿರುವ ನಟ-ನಟಿಯರ ಬಗ್ಗೆ ಮಾಹಿತಿ ಮತ್ತು ಸಾಕ್ಷ್ಯ ಸಂಗ್ರಹಿಸುವಲ್ಲಿ ಎನ್​ಸಿಬಿ ಅಶಿಕಾರಿಗಳು ನಿರತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net