

ರಿಯಾ ಚಕ್ರವರ್ತಿ ಭಯಂಕರ ಸಿಟ್ಟಾಗಿದ್ದಾರೆ. ಒಂದು ಕಡೆ ಸಿಬಿಐನವರು ಪ್ರತೀದಿನ ಕೂರಿಸಿಕೊಂಡು ಎಂಟು-ಹತ್ತು ಗಂಟೆ ಗ್ರಿಲ್ ಮಾಡಿದರೆ ಯಾರಿಗೆ ತಾನೇ ಸಿಟ್ಟು ಬರುವುದಿಲ್ಲ ಹೇಳಿ. ಆದರೆ, ರಿಯಾಗೆ ಸಿಟ್ಟಿರುವುದು ಸಿಬಿಐ ಮೇಲಲ್ಲ, ಸುಶಾಮತ್ ಅವರ ಕುಟುಂದವರ ಮೇಲೆ.
ಸುಶಾಂತ್ ಕುಟುಂಬದವರು ತಮ್ಮ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ರಿಯಾ ಬೇಸರಗೊಂಡಿದ್ದಾರಂತೆ. ಅಷ್ಟೇ ಅಲ್ಲ, ಸುಶಾಂತ್ ಕುಟುಂಬದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಅವರು ನಿರ್ಧರಿಸಿದ್ದಾರೆ ಎಂದು ಅವರ ಲಾಯರ್ ಹೇಳಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ರಿಯಾ ಪರ ವಕೀಲ ಸತೀಶ್ ಮನಶಿಂಧೆ, 'ಸುಶಾಂತ್ಗೆ ಡಿಪ್ರೆಶನ್ ಇದ್ದ ವಿಷಯ ಗೊತ್ತೇ ಇರಲಿಲ್ಲ ಎಂದು ಸುಶಾಂತ್ ಕುಟುಂಬದವರು ಹೇಳಿಕೊಂಡು ಬಂದಿದ್ದಾರೆ. ಆದರೆ, ಸುಶಾಂತ್ ಸಹೋದರಿಯರ ಚಾಟ್ ಮಾಡುವಾಗ ಪ್ರಿಸ್ಕ್ರಿಪ್ಶನ್ ಹಂಚಿಕೊಂಡಿದ್ದು, ಅವರಿಗೆ ಸುಶಾಂತ್ ಡಿಪ್ರೆಶನ್ ಬಗ್ಗೆ ಗೊತ್ತಿತ್ತು ಎಂಬುದು ಸ್ಪಷ್ಟವಾಗುತ್ತದೆ' ಎಂದು ಹೇಳಿಕೊಂಡಿದ್ದಾರೆ.
'ಸುಶಾಂತ್ ಸಹೋದರಿಯರು ಪ್ರಿಸ್ಕ್ರಿಪ್ಶನ್ ಹಂಚಿಕೊಂಡಿರುವುದಷ್ಟೇ ಅಲ್ಲ, ಈ ವಿಷಯವಾಗಿ ನ್ಯಾಯಾಲಯಕ್ಕೆ ಮತ್ತು ಇಡಿಗೆ ಸುಳ್ಳು ಹೇಳಿದ್ದಾರೆ. ಹೀಗೆ ಸತತವಾಗಿ ಸುಳ್ಳು ಹೇಳುವುದರ ಜತೆಗೆ, ಪ್ರಕರಣವನ್ನು ದಿಕ್ಕುತಪ್ಪಿಸುತ್ತಿರುವ ಕುರಿತು ಸುಶಾಂತ್ ಕುಟುಂಬದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಚಿಂತನೆ ನಡೆಸಲಾಗಿದೆ' ಎಂದು ಸತೀಶ್ ಮನಶಿಂಧೆ ಹೇಳಿದ್ದಾರೆ.
ಈ ಮಧ್ಯೆ ಸುಶಾಂತ್ ಆತ್ಮಹತ್ಯೆ ವಿಚಾರವಾಗಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದ ಶೌವಿಕ್ ಚಕ್ರವರ್ತಿಯನ್ನು ವಿಚಾರಣೆಗೊಳಪಡಿಸಿರುವ ಸಿಬಿಐ, ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.