

ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾ ಕುರಿತು ಚರ್ಚೆಗಳಾಗುತ್ತಿರುವುದರ ಬಗ್ಗೆ ನಟ 'ಆ ದಿನಗಳು' ಚೇತನ್ ಈಗಾಗಲೇ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈ ವಿಷಯದಲ್ಲಿ ದಿವಂಗತ ಚಿರಂಜೀವಿ ಸರ್ಜಾ ಅವರನ್ನು ಎಳೆದು ತರುವುದು ಸರಿಯಲ್ಲ ಎಂದು ಈಗಾಗಲೇ ಹೇಳಿದ್ದಾರೆ.
ಇದನ್ನೂ ಓದಿ: ಯಶ್-ರಾಧಿಕಾ ಮಗನ ಹೆಸರು ಕೊನೆಗೂ ಬಹಿರಂಗ …
ಈಗ ಅವರು ಈ ವಿಷಯದ ಇನ್ನೊಂದು ಮಜಲಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರ ಜತೆಗೆ, ನಟ-ನಿರ್ದೇಶಕ ಸುದೀಪ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರಾ ಎಂಬ ಅನುಮಾನ ಬರುವಂತೆ ಮಾತನಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಪ್ರಸ್ತುತವಾಗಿ ಎಲ್ಲರ ಗಮನ ಮಾದಕವಸ್ತುಗಳನ್ನು ಖಾಸಗಿಯಾಗಿ ಬಳಸುವ ಚಲನಚಿತ್ರ ಸಿಬ್ಬಂದಿ ಮತ್ತು ನಟರನ್ನು ಬಹಿರಂಗಪಡಿಸುವುದರ ಮೇಲಿದೆ. ಕೇವಲ ಹಣಕ್ಕಾಗಿ ಮದ್ಯ (ಸೋಡ), ಗುಟ್ಕಾ / ಪಾನ್ ಮಸಾಲಾ, ಜೂಜು (ರಮ್ಮಿ) ... ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ ಸ್ಟಾರ್ಸ್ಗಳ ಮೇಲೆ ಬೆರಳು ತೋರಿಸದಿರುವುದು ಮೋಸವಲ್ಲವೇ? ಇವರು ಸಾಮಾಜಿಕ ದುಷ್ಕೃತ್ಯಗಳ 'ರಾಯಭಾರಿಗಳಲ್ಲವೇ'?' ಎಂದು ಚೇತನ್ ಪ್ರಶ್ನಿಸಿದ್ದಾರೆ.
ಈ ಪೈಕಿ, ನಟ ಸುದೀಪ್ ಅವರು ಈ ಹಿಂದೆ ರಮ್ಮಿ ಕುರಿತ ಒಂದು ಜಾಹೀರಾತಿನಲ್ಲಿ ಭಾಗವಹಿಸಿದ್ದರು. ಅದಕ್ಕೆ ಪ್ರತಿಯಾಗಿ ಹಲವರು ಇದನ್ನು ಖಂಡಿಸಿದ್ದರು. ಒಬ್ಬ ಜವಾಬ್ದಾರಿಯುತ ನಟ, ಈ ರೀತಿ ಜೂಜಿನ ಕುರಿತ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಸರಿಯಲ್ಲ, ಇದರಿಂದ ತಪ್ಪು ಸಂದೇಶ ಕೊಟ್ಟಂತೆ ಆಗುತ್ತದೆ ಎಂದು ಹೇಳಿದ್ದರು. ಕೆಲವು ದಿನಗಳ ನಂತರ ಈ ವಿವಾದ ತಣ್ಣಗಾಗಿತ್ತು.
ಈಗ ಚೇತನ್, ಮತ್ತೊಮ್ಮ ಈ ಪ್ರಕರಣವನ್ನು ಪ್ರಸ್ತಾಪಿಸಿದ್ದಾರೆ. ಬರೀ ಡ್ರಗ್ಸ್ ಅಷ್ಟೇ ಅಲ್ಲ, ಸಾಮಾಜಿಕ ದುಷ್ಕೃತ್ಯಗಳ ಕುರಿತು ಜಾಹೀರಾತು ನೀಡುವ ಸ್ಟಾರ್ಗಳತ್ತಲೂ ಬೆರಳು ತೋರಿಸಬೇಕು ಎಂದು ಹೇಳಿದ್ದಾರೆ. ಹಾಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡವರಿಗೆ, ಯಾರ ಹೆಸರೇಳದೆ, ಸಾಮಾಜಿಕ ದುಷ್ಕೃತ್ಯಗಳ ರಾಯಾಭಾರಿಗಳು ಎಂದು ಹೇಳಿದ್ದಾರೆ.