ಸುಶಾಂತ್​ ಕೇಸ್​ ಸಿಬಿಐಗೆ ಒಪ್ಪಿಸಲು ಅಮಿತ್​ ಶಾಗೆ ರಿಯಾ ಮನವಿ

Amit Shah - Final
Published on

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ನಿಧನರಾದ ಈ ಒಂದು ತಿಂಗಳಲ್ಲಿ, ಅವರ ಕೇಸನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅದೆಷ್ಟು ಜನ ಹೇಳಿದ್ದಾರೋ, ಸರ್ಕಾರವನ್ನು ಆಗ್ರಹಿಸಿದ್ದಾರೋ ಹೇಳುವುದು ಕಷ್ಟ.

ಸುಶಾಂತ್​ ಸಾವಿಗೆ ಬೇರೆ ಬೇರೆ ಮಜಲುಗಳಿವೆ ಎಂದು ಗೊತ್ತಾಗುತ್ತಿದ್ದಂತೆಯೇ ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ನಾಯಕರು, ಸುಶಾಂತ್​ ಆಪ್ತರು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಕ್ಕೆ ಸರ್ಕಾರವನ್ನು ಒತ್ತಾಯಿಸಿದ್ದರು. ಈಗ ಆ ಸಾಲಿಗೆ ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿ ಸಹ ಸೇರಿಕೊಂಡಿದ್ದಾರೆ.

ಸುಶಾಂತ್​ರನ್ನು ಬಹಳವಾಗಿ ಪ್ರೀತಿಸುತ್ತಿದ್ದ ರಿಯಾ, ಕಾರಣಾಂತರಗಳಿಂದ ಬ್ರೇಕ್​ಅಪ್​ ಆಗಿ ಹೊರನಡೆದಿದ್ದರು. ಗೆಳತಿ ಬಿಟ್ಟು ಹೋಗಿದ್ದಿಕ್ಕೆ, ಸುಶಾಂತ್​ ಇಂಥದ್ದೊಂದು ದಾರಿ ಹಿಡಿದರು ಎಂಬ ಮಾತೂ ಆಗಾಗೆ ಕೇಳಿ ಬರುವುದುಂಟು. ಇದೇ ಕಾರಣಕ್ಕೆ, ಸೋಷಿಯಲ್​ ಮೀಡಿಯಾದಲ್ಲಿ ಕೆಲವರು ದ್ವೇಷದಿಂದ ರಿಯಾ ಅವರನ್ನು ಟ್ರೋಲ್​ ಮಾಡಿದ್ದುಂಟು. ರೇಪ್​ ಮತ್ತು ಕೊಲೆ ಬೆದರಿಕೆ ಹಾಕಿದ್ದುಂಟು. ಈ ಕುರಿತು ಸೈಬರ್​ ಪೊಲೀಸ್​ಗೆ ರಿಯಾ ದೂರು ನೀಡಿದ್ದಾರೆ.

ಅಷ್ಟೇ ಅಲ್ಲ, ಇದೀಗ ಗೃಹ ಸಚಿವ ಅಮಿತ್​ ಶಾ ಅವರಿಗೆ ಟ್ವೀಟ್​ ಮೂಲಕ ಒಂದು ಮನವಿಯನ್ನೂ ಮಾಡಿದ್ದಾರೆ. ಸುಶಾಂತ್​ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಕ್ಕೆ ಅವರು ಹೇಳಿದ್ದಾರೆ.

ಈ ಕುರಿತು ಗೃಹ ಸಚಿವ ಅಮಿತ್ ಷಾ ಅವರಿಗೆ ಟ್ವಿಟರ್ ಮೂಲಕ ಮನವಿ ಮಾಡಿಕೊಂಡಿರುವ ರಿಯಾ, ‘ಸುಶಾಂತ್ ನಿಧನರಾಗಿ ಒಂದು ತಿಂಗಳಾಗಿದೆ. ಸುಶಾಂತ್ ಯಾಕೆ ಆತ್ಮಹತ್ಯೆ ಮಾಡಿಕೊಂಡರು, ಅವರಿಗೆ ಏನೆಲ್ಲಾ ಒತ್ತಡಗಳಿದ್ದವು ಎಂದು ತಿಳಿಯಬೇಕಿದೆ. ಅವರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಎಂದು ಕೈ ಮುಗಿದು ಪ್ರಾರ್ಥಿಸುತ್ತೇನೆ’ ಎಂದು ಅವರು ಮನವಿ ಮಾಡಿದ್ದಾರೆ.

ರಿಯಾ ಅವರ ಈ ಮನವಿ ಗೃಹ ಸಚಿವರು ಏನನ್ನುತ್ತಾರೋ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net