ನಾನು ಮಾಡಿದ ತಪ್ಪೆಂದರೆ RGV ಜತೆ... 2 ವರ್ಷದ ಹಿಂದಿನ ಘಟನೆ ನೆನೆದು ಕಣ್ಣೀರಾಕಿದ ಜೂ.​ ಸಮಂತಾ! Ashu Reddy

Ashu Reddy
Published on

Ashu Reddy : ಚಲ್​ ಮೋಹನ್​ ರಂಗ ಚಿತ್ರದ ಮೂಲಕ ಟಾಲಿವುಡ್​ನಲ್ಲಿ ಸಿನಿ ಜರ್ನಿ ಆರಂಭಿಸಿದ ನಟಿ ಆಶು ರೆಡ್ಡಿ, ಬಿಗ್​ಬಾಸ್​ ಸಿಸನ್​ 3ರಲ್ಲಿ ಭಾಗವಹಿಸುವ ಮೂಲಕ ತುಂಬಾ ಖ್ಯಾತಿಯನ್ನು ಪಡೆದಿದ್ದಾರೆ. ನೋಡಲು ಸ್ವಲ್ಪ ಸಮಂತಾರನ್ನೇ ಹೋಲುವ ಆಶು ರೆಡ್ಡಿಯನ್ನು ಟಾಲಿವುಡ್​ನಲ್ಲಿ ಜೂನಿಯರ್​ ಸಮಂತಾ ಅಂತಾನೇ ಕರೆಯುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಆಶು ರೆಡ್ಡಿ, ಆಗಾಗ ತಮ್ಮ ಬೋಲ್ಡ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಅಲ್ಲದೆ, ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಬೋಲ್ಡ್​ ಕಂಟೆಂಟ್​ ಮತ್ತು ವಿಡಿಯೋಗಳನ್ನು ಶೇರ್​ ಮಾಡುವ ಮೂಲಕ ಟ್ರೋಲ್​ಗು ಗುರಿಯಾಗುತ್ತಿರುತ್ತಾರೆ.

ಇದೀಗ ಆಶು ರೆಡ್ಡಿ ಅವರು ಎರಡು ವರ್ಷಗಳ ಹಿಂದೆ ಆರ್‌ಜಿವಿ ಜೊತೆ ನಡೆದ ಘಟನೆಯೊಂದನ್ನು ನೆನೆಸಿಕೊಂಡು ಕಣ್ಣೀರಾಕಿದ್ದಾರೆ. ಎರಡು ವರ್ಷದ ಹಿಂದೆ ಆಶು ರೆಡ್ಡಿ ಅವರು ಆರ್​ಜಿವಿ ಜತೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿತ್ತು. ಡೇಂಜರಸ್ ಚಿತ್ರದ ಪ್ರಚಾರದ ಭಾಗವಾಗಿ ಆರ್‌ಜಿವಿ ಕೆಲವು ವಿಶೇಷ ಸಂದರ್ಶನಗಳನ್ನು ಆ ಸಮಯದಲ್ಲಿ ಮಾಡಿದ್ದರು. ಇದೇ ವೇಳೆ ಆಶು ರೆಡ್ಡಿ ಜತೆಯೂ ಸಂದರ್ಶನ ಮಾಡಿದರು. ಈ ವೇಳೆ ಆರ್‌ಜಿವಿ, ಆಶು ರೆಡ್ಡಿಯ ಕಾಲುಗಳನ್ನು ಹಿಡಿದು, ಅವರ ಪಾದಗಳಿಗೆ ಮುತ್ತಿಕ್ಕಿದ್ದರು. ಅಲ್ಲದೆ, ಅವರ ಪಾದಗಳನ್ನು ಸಹ ನೆಕ್ಕಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕು ವೈರಲ್​ ಆಗಿ ಭಾರಿ ಟ್ರೋಲ್​ ಆಗಿತ್ತು.

ಆ ಸಂದರ್ಶನದಿಂದ ಆಶು ರೆಡ್ಡಿ ಕೂಡ ಬಹಳ ಜನಪ್ರಿಯರಾದರು. ಅಂದಹಾಗೆ ಆರ್‌ಜಿವಿಗೆ ವಿವಾದಗಳು ಹೊಸದೇನಲ್ಲ. ಆಶು ರೆಡ್ಡಿ ಜತೆಗಿನ ಸಂದರ್ಶನದ ವಿವಾದದ ಬಗ್ಗೆ ಸಾಕಷ್ಟು ಟೀಕೆಗಳು ಬಂದವು. ಆದರೆ ಅವರು ಅದ್ಯಾವುದನ್ನು ಲೆಕ್ಕಿಸಲಿಲ್ಲ. ಏನೇ ಆಗಲಿ ಆರ್​ಜಿವಿ ಮಾತ್ರ ತನಗೆ ಇಷ್ಟವಾದದ್ದನ್ನೇ ಮಾಡುತ್ತಾರೆ. ಆದಾಗ್ಯೂ, ಆಶು ರೆಡ್ಡಿ ಆರ್‌ಜಿವಿ ಜೊತೆಗಿನ ಸಂದರ್ಶನಕ್ಕೆ ಒಪ್ಪಿಕೊಂಡಿದ್ದಕ್ಕೆ ಎಲ್ಲರೂ ಆಕೆಯನ್ನು ಟೀಕಿಸಿದರು. ಸಿಕ್ಕಾಪಟ್ಟೆ ಟ್ರೋಲ್​ ಸಹ ಮಾಡಿದರು.

ಇತ್ತೀಚಿನ ಸಂದರ್ಶನವೊಂದರಲ್ಲಿ ಆಶು ರೆಡ್ಡಿ, ಆ ಸಂದರ್ಶನದ ನಂತರ ಅವರು ಎದುರಿಸಿದ ತೊಂದರೆಗಳ ಬಗ್ಗೆ ಮಾತನಾಡಿದ್ದಾರೆ. ನಾನು ಡೇಂಜರಸ್ ಚಿತ್ರದ ಪ್ರಚಾರದ ಭಾಗವಾಗಿ ಆ ಸಂದರ್ಶನಕ್ಕೆ ಹೋಗಿದ್ದೆ. ಆರ್​ಜಿವಿ ಹಾಗೆ ಕೇಳುತ್ತಾರೆಂದು ನಾನು ನಿರೀಕ್ಷಿಸಿರಲಿಲ್ಲ. ಆ ಸಂದರ್ಶನದ ನಂತರ, ನನಗೆ ಬಹಳಷ್ಟು ಟೀಕೆಗಳು ಬಂದವು. ನಾನು ಅವುಗಳನ್ನು ಎದುರಿಸಬಲ್ಲೆ. ನನಗೆ ಅದು ಮುಖ್ಯವಲ್ಲ. ಆದರೆ ಆ ಸಂದರ್ಶನದ ನಂತರ, ಎಲ್ಲರೂ ನನ್ನ ಹೆತ್ತವರೊಂದಿಗೆ ನೆಗೆಟಿವ್​ ಆಗಿ ಮಾತನಾಡಿದರು. ನಾವಿರುವ ಅಪಾರ್ಟ್​ಮೆಂಟ್​ನಲ್ಲಿ ನಮ್ಮ ಸುತ್ತಲೂ ಇರುವ ಅನೇಕರು ನನ್ನ ಹೆತ್ತವರೊಂದಿಗೆ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಅದರಿಂದಾಗಿ ನನ್ನ ಪಾಲಕರು ತುಂಬಾ ಮುಜುಗರಕ್ಕೆ ಒಳಗಾದರು. ಅದು ನನ್ನ ಜೀವನದಲ್ಲಿ ನಾನು ಮಾಡಿದ ತಪ್ಪು. ಈ ಘಟನೆಯ ನಂತರ ನಾನು ಅದರ ಬಗ್ಗೆ ಗಂಭೀರವಾಗಿ ಯೋಚಿಸಿದೆ ಮತ್ತು ನನ್ನನ್ನು ನಾನು ಕೇಳಿಕೊಂಡೆ, ನಾನು ಈ ಕ್ಷೇತ್ರಕ್ಕೆ ಬಂದಿದ್ದು ಇದಕ್ಕಾಗಿಯೇ? ಎಂದು ಪ್ರಶ್ನಿಸಿಕೊಂಡೆ. ನಾನು ಮತ್ತೆ ಎಂದಿಗೂ ಆ ರೀತಿ ಮಾಡುವುದಿಲ್ಲ ಎಂದು ಅಂದೇ ನಿರ್ಧರಿಸಿದೆ ಮತ್ತು ಮನೆಯಲ್ಲಿ ಕ್ಷಮೆ ಕೂಡ ಕೇಳಿದೆ ಎಂದು ಆಶು ರೆಡ್ಡಿ ಹೇಳಿದ್ದಾರೆ.

ನೀವು ಇನ್ನೂ ಆರ್‌ಜಿವಿ ಜೊತೆ ಸಂಪರ್ಕದಲ್ಲಿ ಇದ್ದೀರಾ ಎಂದು ಇದೇ ಸಂದರ್ಭದಲ್ಲಿ ಆಶು ರೆಡ್ಡಿ ಅವರನ್ನು ಕೇಳಿದಾಗ, ನಾನೀಗ ಆರ್‌ಜಿವಿ ಜೊತೆ ಮಾತನಾಡುವುದಿಲ್ಲ. ನಾನು ಅವರ ಜೊತೆ ಕೆಲಸದ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದರು. ಸಂದರ್ಶನದ ನಂತರವೂ ಆರ್​ಜಿವಿ ಅವರು ಒಂದು ಕಾರ್ಯಕ್ರಮಕ್ಕಾಗಿ ನನ್ನನ್ನು ಕರೆದರು. ಆದರೆ ನಾನು ಹೋಗಲಿಲ್ಲ. ನಾನು ಅವರಿಗೆ ಕರೆ ಕೂಡ ಮಾಡುವುದಿಲ್ಲ ಎಂದು ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net