

ಮುಂಬೈ: ಖ್ಯಾತ ನೃತ್ಯ ನಿರ್ದೇಶಕ ಮತ್ತು ನಿರ್ದೇಶಕ ರೆಮೋ ಡಿಸೋಜ ಅವರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯ ಐಸಿಯೂನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮದುವೆಯಾಗಿ ದೊಡ್ಡ ತಪ್ಪು ಮಾಡಿದರಂತೆ ರಾಖಿ ಸಾವಂತ್
ರೆಮೋ ಡಿಸೋಜ ಬಾಲಿವುಡ್ನ ಜನಪ್ರಿಯ ನೃತ್ಯ ನಿರ್ದೇಶಕರು. ಹಲವು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿ ತಮ್ಮದೇ ಛಾಪು ಮೂಡಿಸಿದವರು. ಅಷ್ಟೇ ಅಲ್ಲ, 'ಬಾಜಿರಾವ್ ಮಸ್ತಾನಿ' ಚಿತ್ರದ ನೃತ್ಯ ನಿರ್ದೇಶನಕ್ಕೆ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನೃತ್ಯ ನಿರ್ದೇಶಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬರೀ ನೃತ್ಯ ನಿರ್ದೇಶನವಷ್ಟೇ ಅಲ್ಲ, ನಿರ್ದೇಶನದಲ್ಲೂ ಗುರುತಿಸಿಕೊಂಡಿರುವ ರೆಮೋ, ಕೆಲವು ಚಿತ್ರಗಳಿಗೂ ಆಕ್ಷನ್-ಕಟ್ ಹೇಳಿದ್ದಾರೆ. 'ಸ್ಟ್ರೀಟ್ ಡ್ಯಾನ್ಸರ್ 3ಡಿ', 'ಎಬಿಸಿಡಿ', 'ಎಬಿಸಿಡಿ 2', 'ಫ್ಲೈಯಿಂಗ್ ಜಾಟ್', 'ರೇಸ್ 3' ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಅವರು 'ಡ್ಯಾನ್ಸ್ ಪ್ಲಸ್', 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ಮತ್ತು 'ಝಲಕ್ ದಿಕ್ಲಾಜಾ' ಮುಂತಾದ ಕೆಲವು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿದ್ದಾರೆ.
ಇದನ್ನೂ ಓದಿ: ನಟಿ ಸಂಜನಾಗೆ ಜಾಮೀನು ಮಂಜೂರು
ಹೀಗೆ ಸದಾ ಸಕ್ರಿಯರಾಗಿರುವ ಅವರಿಗೆ, ಇತ್ತೀಚೆಗೆ ಹೃದಯಾಘಾತವಾಗಿತ್ತು. ಅವರಿಗೆ ತಕ್ಷಣವೇ ಚಿಕಿತ್ಸೆ ನೀಡಲಾಗಿದ್ದು, ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಎಂದು ಹೇಳಲಾಗಿದೆ.