ಆ ಘಟನೆಯಿಂದ ತಲೆಗೂದಲು ಉದುರಿತು, ಧ್ವನಿಯೂ ಬದಲಾಯ್ತು! ಹಾಸ್ಯನಟನ ಹಿಂದಿದೆ ನೋವಿನ ಕತೆ

Motta Rajendran
Published on

ಚೆನ್ನೈ: ನಟ ಮತ್ತು ಖಳನಟನಾಗಿ ನಟಿಸುವುದು ತುಂಬಾ ಸುಲಭ. ಆದರೆ, ಹಾಸ್ಯ ನಟನಾಗುವುದು ಸುಲಭವಲ್ಲ. ಒಬ್ಬರ ಮುಖದಲ್ಲಿ ನಗು ತರಿಸುವುದೆಂದರೆ ಅದು ಸವಾಲಿನ ಕೆಲಸ. ಅದಕ್ಕಾಗಿ ವಿಶೇಷ ಪ್ರತಿಭೆ ಇರಬೇಕು. ಹಾಗಿದ್ದರೆ ಮಾತ್ರ ಯಾವುದೇ ಇಂಡಸ್ಟ್ರಿಯಲ್ಲಿ ಒಬ್ಬ ಹಾಸ್ಯನಟನಾಗಿ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿಯಬಹುದು. ಆ ವರ್ಗದಲ್ಲಿ ಈಗಾಗಲೇ ಸ್ಯಾಂಡಲ್​ವುಡ್​, ಟಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ಅನೇಕ ಸ್ಟಾರ್ ಕಾಮಿಡಿಯನ್‌ಗಳು ಇದ್ದಾರೆ. ಅವರಲ್ಲಿ ಮೊಟ್ಟೆ ರಾಜೇಂದ್ರನ್ ಕೂಡ ಒಬ್ಬರು. ಅವರನ್ನು ‘ನಾನ್ ಕಡವುಳ್ ರಾಜೇಂದ್ರನ್’ ಎಂದೂ ಕರೆಯುತ್ತಾರೆ.

ಸಾಕಷ್ಟು ಸೂಪರ್​ ಹಿಟ್​ ಸಿನಿಮಾದಲ್ಲಿ ನಟಿಸಿರುವ ರಾಜೇಂದ್ರನ್​ ತಮ್ಮ ವಿಶಿಷ್ಟ ಧ್ವನಿಯಿಂದಲೇ ತುಂಬಾ ಫೇಮಸ್​. ರಾಜೇಂದ್ರನ್​ ಅವರು ಚಿತ್ರರಂಗಕ್ಕೆ ಹೇಗೆ ಪರಿಚಯವಾದರು? ಅವರ ಕುಟುಂಬದ ಹಿನ್ನೆಲೆ ಏನು? ಎಂಬುದನ್ನು ನಾವೀಗ ತಿಳಿಯೋಣ.

ರಾಜೇಂದ್ರನ್ ಅವರು ಸಿನಿಮಾಗಳಲ್ಲಿ ಬೋಳುತಲೆಯಲ್ಲಿ ಕಾಣಿಸಿಕೊಳ್ಳುವುದರಿಂದ ಅವರನ್ನು ಮೊಟ್ಟೆ ರಾಜೇಂದ್ರನ್​ ಎಂದು ಕರೆಯುತ್ತಾರೆ. ಇವರು 1975, ಜೂನ್ 1ರಂದು ತಮಿಳುನಾಡಿನ ತೂತುಕುಡಿಯಲ್ಲಿ ಜನಿಸಿದರು. ಆರಂಭದಲ್ಲಿ ಹೀರೋಗಳಿಗೆ ಸ್ಟಂಟ್ ಡ್ಯೂಪ್ ಮತ್ತು ಡಬಲ್ ಆಗಿ ನಟಿಸುತ್ತಿದ್ದರು. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಸ್ಟಂಟ್‌ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಇದಾದ ನಂತರ 2003ರಲ್ಲಿ ತಮಿಳಿನ ‘ಪಿತಾಮಗನ್’ ಚಿತ್ರದ ಮೂಲಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾದರು. ಬಳಿಕ ಹಲವು ಚಿತ್ರಗಳಲ್ಲಿ ನಟನಾಗಿ ರಂಜಿಸಿದರು.

ಒಂದು ದಿನ ಚೆನ್ನೈನ ಕಲಾಪೇಟ್​ನಲ್ಲಿ ಮಲಯಾಳಂ ಚಿತ್ರದ ಶೂಟಿಂಗ್ ವೇಳೆ, ಕೆರೆಯೊಂದಕ್ಕೆ ಹಾರುವ ಸನ್ನಿವೇಶ ಇತ್ತು. ಅಂದು ರಾಜೇಂದ್ರನ್​ ಅವರು ಕೆರೆಗೆ ಹಾರಿದ್ದೇ ಅಂದಿನಿಂದ ಅವರ ಸಿನಿ ಬದುಕೇ ಬದಲಾಯಿತು. ಏಕೆಂದರೆ, ಆ ಕೆರೆಯಲ್ಲಿ ಬರೀ ರಾಸಾಯನಿಕಗಳೇ ತುಂಬಿತ್ತು. ಅದು ಕೂಡ ಕಾರ್ಖಾನೆಯಿಂದ ಹೊರಬರುತ್ತಿದ್ದ ಕೆಮಿಕಲ್ಸ್​. ಅದ್ಯಾವುದೂ ತಿಳಿಯದೆ ರಾಜೇಂದ್ರನ್ ಕೆರೆಗೆ ಹಾರಿದ್ದರು. ಈ ವೇಳೆ ಆ ಕೆರೆಯ ನೀರು ಸಹ ರಾಜೇಂದ್ರನ್​ ಹೊಟ್ಟೆಯನ್ನು ಸೇರಿತ್ತು. ಇದರ ಪರಿಣಾಮ ರಾಜೇಂದ್ರನ್​ ಕೂದಲೆಲ್ಲಾ ಉದುರಿ ಹೋಯಿತು. ಭವಿಷ್ಯದಲ್ಲಿ ಕೂದಲು ಬೆಳೆಯುವ ಸಾಧ್ಯತೆ ಇಲ್ಲ ಎಂದು ವೈದ್ಯರು ಕೂಡ ತೀರ್ಮಾನಿಸಿದರು.

ಇದಿಷ್ಟೇ ಅಲ್ಲದೆ, ರಾಜೇಂದ್ರನ್ ಅವರ ಮುಖ ಕೂಡ ಪೂರ್ತಿ ಒರಟಾಯಿತು. ಅನೇಕ ಆರೋಗ್ಯ ಸಮಸ್ಯೆಗಳು ಕೂಡ ಬಂದವು. ವಿಶೇಷವಾಗಿ ಜೀರ್ಣಾಂಗವ್ಯೂಹ ಮತ್ತು ಇತರ ಉಸಿರಾಟದ ತೊಂದರೆಗಳು ಎದುರಾಯಿತು. ಆದರೆ, ವಾಸ್ತವವಾಗಿ, ಚಿಕಿತ್ಸೆಗೆ ಅವರ ಬಳಿ ಹಣವಿರಲಿಲ್ಲ. ಇಂಡಸ್ಟ್ರಿಯಲ್ಲೂ ಇವರಿಗೆ ಯಾರೂ ಸಹಾಯ ಮಾಡಲಿಲ್ಲ. ಇದರಿಂದ ಅವರ ಸಂಪೂರ್ಣ ರೂಪವೇ ಬದಲಾಯಿತು. ಆದರೂ ರಾಜೇಂದ್ರನ್ ಎದೆಗುಂದದೆ ಮತ್ತೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು.

ಈ ಘಟನೆಯ ಬಳಿಕ ರಾಜೇಂದ್ರನ್​ ಅವರು ಹಾಸ್ಯನಟನಾಗಿ ಅನೇಕ ಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು. ಇದರ ಜೊತೆಗೆ ಹಲವು ಸಿನಿಮಾಗಳಲ್ಲಿ ವಿಲನ್ ಆಗಿಯೂ ನಟಿಸಿದ್ದಾರೆ. ರಾಜೇಂದ್ರನ್ ಒಂದು ಕಡೆ ಹಾಸ್ಯನಟನಾಗಿ ಮತ್ತೊಂದು ಕಡೆ ನಟನಾಗಿ 160ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರಿಗೆ ಹೆಚ್ಚು ಮನ್ನಣೆ ತಂದುಕೊಟ್ಟ ಸಿನಿಮಾಗಳೆಂದರೆ, ಸಿಂಗಂ 3, ತೇರಿ, ರಾಜಾ ರಾಣಿ, ಕಾಂಚನ 2 ಹಾಗೂ ಅರುಣ್ಮನೈ 4. ಇದಲ್ಲದೆ, ರಾಜೇಂದ್ರನ್ ಅನೇಕ ತೆಲುಗು ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ಲಕ್ಷ್ಮಿ ನರಸಿಂಹ, ಗುಡುಂಬಾ ಶಂಕರ್, ಅತಿಥಿ, ಚಲೋ ಹಾಗೂ ಸಮ್ಮತಮೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಯಾವ ಚಿತ್ರವೂ ರಾಜೇಂದ್ರನ್‌ಗೆ ಮನ್ನಣೆ ತಂದುಕೊಡಲಿಲ್ಲ. ಆದರೆ ಎಫ್ 3, ವಾಲ್ಟರ್​ ವೀರಯ್ಯ ಹಾಗೂ ಸರ್ ಸಿನಿಮಾಗಳು ರಾಜೇಂದ್ರನ್ ಅವರಿಗೆ ತೆಲುಗಿನಲ್ಲಿ ಉತ್ತಮ ಖ್ಯಾತಿಯನ್ನು ತಂದುಕೊಟ್ಟಿತು.

ರಾಜೇಂದ್ರನ್​ಗೆ ಪ್ರಸ್ತುತ 67 ವರ್ಷ. ನಟಿಯೊಬ್ಬರನ್ನು ರಾಜೇಂದ್ರನ್​ ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿದೆ. ಆದರೆ, ಮದುವೆ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಮಾಹಿತಿ ಇಲ್ಲ. ಹಲವು ಚಿತ್ರಗಳಲ್ಲಿ ನಟಿಸಿರುವ ರಾಜೇಂದ್ರನ್ ಅವರ ಬಳಿ ಉತ್ತಮ ಆಸ್ತಿ ಇದೆ. ಅದರಲ್ಲೂ ಚೆನ್ನೈನಲ್ಲಿ ಸುಮಾರು 15 ಕೋಟಿ ರೂ. ಮೌಲ್ಯದ ಮನೆ ಹೊಂದಿದ್ದಾರೆ. ಜೊತೆಗೆ 3 ಐಷಾರಾಮಿ ಕಾರುಗಳೂ ಇವೆ. ಎಷ್ಟೇ ಐಶ್ವರ್ಯವಿದ್ದರೂ ತುಂಬಾ ಸರಳವಾಗಿರುವುದು ರಾಜೇಂದ್ರನ ಹಿರಿಮೆ. ಇದಲ್ಲದೆ, 67 ನೇ ವಯಸ್ಸಿನಲ್ಲಿಯೂ ಸಿನಿಮಾಗಾಗಿ ತುಂಬಾ ಫಿಟ್ ಆಗಿ ಕಾಣುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net