ಆಕ್ಷನ್​ ಹೀರೋಗಳಿಗೆ ಸಾಹಸ ನಿರ್ದೇಶನ ಮಾಡುತ್ತಿರುವ ರವಿ ವರ್ಮ

Baap 1
Published on

ಮುಂಬೈ: ಎಂಬತ್ತರ ದಶಕದ ಬಾಲಿವುಡ್​ನ ಆ್ಯಕ್ಷನ್​ ಹೀರೋಗಳನ್ನು ಒಂದೇ ಚಿತ್ರದಲ್ಲಿ ಕರೆದುಕೊಂಡು ಬರುವ ಪ್ರಯತ್ನವೊಂದು ಆಗುತ್ತಿರುವುದು ಗೊತ್ತಿರಬಹುದು. ವಿಶೇಷವೆಂದರೆ, ಈ ಆಕ್ಷನ್​ ಹೀರೋಗಳಿಗೆ ಕನ್ನಡದ ರವಿ ವರ್ಮ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.

80ರ ದಶಕದ ಸ್ಟಾರ್​ ನಟರಾದ ಮಿಥುನ್​ ಚಕ್ರವರ್ತಿ, ಸನ್ನಿ ಡಿಯೋಲ್​, ಸಂಜಯ್​ ದತ್​ ಮತ್ತು ಜಾಕಿ ಶ್ರಾಫ್​, 'ಬಾಪ್​' ಎಂಬ ಚಿತ್ರದಲ್ಲಿ ನಟಸುತ್ತಿದ್ದಾರೆ. ಕಳೆದ ಜೂನ್​ನಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಭರದಿಂದ ಸಾಗುತ್ತಿದೆ. ಈಗ ಈ ನಾಲ್ವರೂ ಹೀರೋಗಳಿಗೆ ರವಿ ವರ್ಮ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಭರ್ಜರಿ ಆಕ್ಷನ್​ ಚಿತ್ರವಾಗಿದ್ದು, ಮೈನವಿರೇಳಿಸುವ ಆಕ್ಷನ್​ ದೃಶ್ಯಗಳಿರುತ್ತವಂತೆ. ಇಂಥದ್ದೊಂದು ಚಿತ್ರಕ್ಕೆ, ಅದರಲ್ಲೂ ಆಕ್ಷನ್​ ಹೀರೋಗಳಿಗೆ ರವಿ ವರ್ಮ ಸಾಹಸ ಸಂಯೋಜನೆ ಮಾಡುತ್ತಿರುವುದು ವಿಶೇಷ.

ರವಿ ವರ್ಮ ಬಾಲಿವುಡ್​ನಲ್ಲಿ ಸಾಹಸ ಸಂಯೋಜನೆ ಮಾಡುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮುನ್ನ ಶಾರೂಖ್​ ಖಾನ್​, ಸಲ್ಮಾನ್​ ಖಾನ್​ ಸೇರಿದಂತೆ ಬಾಲಿವುಡ್​ನ ಜನಪ್ರಿಯ ನಟರಿಗೆ ಅವರು ಸಾಹಸ ನಿರ್ದೇಶನ ಮಾಡಿದ್ದರು. ಈಗ ಮೊದಲ ಬಾರಿಗೆ ಹಿರಿಯ ನಟರೆಲ್ಲ ಸೇರಿ ನಟಿಸುತ್ತಿರುವ ಈ ಚಿತ್ರಕ್ಕೆ ಅವರು ಫೈಟ್​ ಮಾಡಿಸುತ್ತಿದ್ದಾರೆ.

80ರ ದಶಕದಲ್ಲಿ ದೊಡ್ಡ ಹೆಸರು ಮಾಡಿದ್ದ ಈ ನಾಲ್ವರು ನಟರು ಒಂದೇ ಚಿತ್ರದಲ್ಲಿ ಒಟ್ಟಿಗೆ ನಟಿಸಿದ ಉದಾಹರಣೆ ಇರಲಿಲ್ಲ. ಈಗ ಇವರನ್ನೆಲ್ಲ ಸೇರಿಸಿ 'ಬಾಪ್​' ಚಿತ್ರವನ್ನು ನಿರ್ಮಿಸುತ್ತಿದ್ದಾರೆ "ಭಾಗಿ 2', "ಭಾಗಿ 3' ಮತ್ತು "ಹೀರೋಪಂತಿನ 2' ಚಿತ್ರಗಳ ಖ್ಯಾತಿಯ ನಿರ್ದೇಶಕ ಅಹ್ಮದ್​ ಖಾನ್​. ಈ ಚಿತ್ರವನ್ನು ವಿವೇಕ್​ ಚೌಹಾಣ್​ ನಿರ್ದೇಶನ ಮಾಡುತ್ತಿದ್ದಾರೆ.

ಹಾಲಿವುಡ್​ನ "ಎಕ್ಸ್​ಪೆಂಡಬಲ್ಸ್​' ಶೈಲಿಯ ಚಿತ್ರ ಇದಾಗಲಿದ್ದು, ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net