'ಎಂಆರ್’ ನಿಲ್ಲುವುದಿಲ್ಲ ... ಚಿತ್ರ ಮುಂದುವರೆಸಲು ರವಿ ಶ್ರೀವತ್ಸ ನಿರ್ಧಾರ

Rai - Srivatsa - Final
Published on

ಬೆಂಗಳೂರು: ಮುತ್ತಪ್ಪ ರೈ ಕುರಿತು ಚಿತ್ರವನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ, ಚಿತ್ರವನ್ನು ಅಂದುಕೊಂಡಂತೆ ಚಿತ್ರೀಕರಣ ಮಾಡಿ, ಬಿಡುಗಡೆ ಮಾಡುವುದಾಗಿ ನಿರ್ದೇಶಕ ರವಿ ಶ್ರೀವತ್ಸ ಹೇಳಿದ್ದಾರೆ.

ಮುತ್ತಪ್ಪ ರೈ ಅವರ ಜೀವನವನ್ನಾಧರಿಸಿ ‘ಎಂಆರ್’ ಎಂಬ ಚಿತ್ರವನ್ನು ಇತ್ತೀಚೆಗಷ್ಟೇ ಪ್ರಾರಂಭಿಸಿದ್ದರು ರವಿ ಶ್ರೀವತ್ಸ. ಈ ಮಧ್ಯೆ, ಮುತ್ತಪ್ಪ ರೈ ಕುರಿತು ತಾವು ಸಿನಿಮಾ ಮಾಡುತ್ತಿರುವುದಾಗಿ ಅವರ ಆಪ್ತ ಪದ್ಮನಾಭ್ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ‘ಎಂಆರ್’ ಚಿತ್ರವನ್ನು ಕೈಬಿಡುವಂತೆ ಸೂಚಿಸಿದ್ದರು.

ಈ ಕುರಿತು ‘ವಿಜಯವಾಣಿ’ ಸೋಮವಾರ ಪ್ರತಿಕ್ರಿಯಿಸಿರುವ ಅವರು, ‘ಚಿತ್ರ ನಿಲ್ಲಿಸುವ ಮಾತಿಲ್ಲ. ‘ಎಂಆರ್’ ಚಿತ್ರವನ್ನು ಖಂಡಿತಾ ನಿರ್ದೇಶನ ಮಾಡುತ್ತೇನೆ. ಒಂದೇ ವಿಷಯದ ಬಗ್ಗೆ ಎರಡು, ಮೂರು ಚಿತ್ರಗಳು ನಿರ್ಮಾಣವಾದ ಉದಾಹರಣೆಗಳು ಹಲವಿದೆ. ಅದೇ ರೀತಿಯಲ್ಲಿ ಮುತ್ತಪ್ಪ ರೈ ಕುರಿತು ಅವರೂ ಸಿನಿಮಾ ಮಾಡಲಿ, ನಾನೂ ಸಿನಿಮಾ ಮಾಡುತ್ತೇನೆ. ಇಲ್ಲಿ ಯಾರೂ, ಯಾರನ್ನೂ ತಡೆಯುವುದಕ್ಕೆ ಸಾಧ್ಯ ಇಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕಿದೆ. ಇಷ್ಟಕ್ಕೂ ನಾನೇನು ಮುತ್ತಪ್ಪ ರೈ ಅವರನ್ನು ಕೆಟ್ಟದಾಗಿ ತೋರಿಸುತ್ತಿಲ್ಲ. ನಡೆದಿರುವ ಸತ್ಯಗಳನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸದ್ಯದಲ್ಲೇ ಲೊಕೇಶನ್ ನೋಡುವುದಕ್ಕೆ ಮುಂಬೈಗೆ ಹೋಗುತ್ತಿದ್ದೇನೆ. ಅಂದುಕೊಂಡಂತೆ, ಚಿತ್ರ ಮಾಡುತ್ತಿದ್ದೇನೆ’ ಎನ್ನುತ್ತಾರೆ ರವಿ ಶ್ರೀವತ್ಸ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net