

ಯಶ್ ಅಭಿನಯದ ‘ಕೆಜಿಎಫ್ 2’ ಚಿತ್ರದಲ್ಲಿ ರವೀನಾ ಟಂಡನ್ ಒಂದು ಮುಖ್ಯ ಪಾತ್ರದಲ್ಲಿ ನಟಿಸಿರುವುದು ಗೊತ್ತೇ ಇದೆ. ಈಗಾಗಲೇ ಅವರು, ಲಾಕ್‌ಡೌನ್‌ಗಿಂಥ ಮುಂಚೆಯೇ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿ, ಮುಂಬೈಗೆ ವಾಪಸ್ಸಾಗಿದ್ದಾರೆ.
ಇಷ್ಟಕ್ಕೂ ಚಿತ್ರದಲ್ಲಿನ ಅವರ ಪಾತ್ರವೇನು? ಈ ಬಗ್ಗೆ ಚಿತ್ರತಂಡದವರು ಯಾವುದೇ ರಹಸ್ಯವನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ. ಮೊದಲ ಭಾಗದಲ್ಲಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹೋಲುವ ಪ್ರಧಾನಿ ಪಾತ್ರವು ಕೆಲವು ಕ್ಷಣಗಳ ಕಾಲ ಬಂದು ಹೋಗುತ್ತದೆ. ರವೀನಾ ಅವರು ಆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಆ ಪಾತ್ರದ ಮಹತ್ವವೇನು ಎಂಬುದು ಇದುವರೆಗೂ ಬಹಿರಂಗವಾಗಿಲ್ಲ.
ಈಗ ರವೀನಾ ಅವರೇ ‘ಕೆಜಿಎಫ್ 2’ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಚಿತ್ರದಲ್ಲಿ ನಾನೊಬ್ಬ ರಾಜಕಾರಣಿಯ ಪಾತ್ರ ಮಾಡುತ್ತಿದ್ದೇನೆ. ಬಹಳ ಗಟ್ಟಿಯಾದ ಪಾತ್ರ ಅದು. ನಿಜ ಹೇಳಬೇಕೆಂದರೆ, ಚಿತ್ರದ ಹೀರೋ ಮತ್ತು ವಿಲನ್ ಎರಡೂ ಆ ಪಾತ್ರವೇ ಆಗಿರುತ್ತದೆ’ ಎಂದು ಹೇಳಿಕೊಂಡಿದ್ದಾರೆ.
‘ಕೆಜಿಎ್ 2’ ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿದಿದ್ದು, ಇನ್ನೂ ಕೆಲವು ದಿನಗಳ ಚಿತ್ರೀಕರಣ ಬಾಕಿ ಇದೆ. ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್ ಮುಂತಾದವರು ನಟಿಸಿರುವ ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದು, ಹೊಂಬಾಳೆ ಫಿಲಂಸ್‌ನಡಿ ವಿಜಯಕುಮಾರ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ.