ಇದು 'ರಾತ್ರೋ ರಾತ್ರಿ' ನಡೆಯುವ ಹಾರರ್ ಕಥನ; ಜ.14ಕ್ಕೆ ಹೆದರಿಸಲು ಬರ್ತಿದ್ದಾರೆ ಹೊಸಬರು!

Team
Published on

ಬೆಂಗಳೂರು: ಹೊಸಬರೇ ಸೇರಿಕೊಂಡು ’ರಾತ್ರೋರಾತ್ರಿ’ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಈ ಸಿನಿಮಾ ಸಂಜೆ ಆರು ಗಂಟೆಯಿಂದ ಬೆಳಿಗ್ಗೆ ಆರು ಗಂಟೆವರೆಗೆ ನಡೆಯುವ 12 ಗಂಟೆಗಳ ಕತೆಯಾಗಿದೆ. ಆ 12 ಗಂಟೆಯ ಅವಧಿಯಲ್ಲಿ ಏನೆಲ್ಲ ಆಗುತ್ತದೆ ಎಂಬುದೇ ರಾತ್ರೋರಾತ್ರಿ ಸಿನಿಮಾ. ಈ ಚಿತ್ರಕ್ಕೆ ಪವನ್​ಕುಮಾರ್​ ನಾಯಕನಾಗಿ ಎಂಟ್ರಕೊಟ್ಟಿದ್ದಾರೆ. ಈಗಾಗಲೇ 400ಕ್ಕೂ ಅಧಿಕ ಸಿನಿಮಾಗಳಿಗೆ ಫೈಟ್ ಮಾಸ್ಟರ್ ಆಗಿ ಕೆಲಸ ಮಾಡಿರುವ ದಾಸ್ ಅವರ ಪುತ್ರನೇ ಪವನ್​ಕುಮಾರ್. ಈ ಚಿತ್ರಕ್ಕೆ ಪವನ್ ಚಿತ್ರಾಲಯ ಸಂಸ್ಥೆ ಬಂಡವಾಳ ಹೂಡಿ ನಿರ್ಮಾಣದ ಜವಾಬ್ದಾರಿ ಹೊತ್ತಿದೆ.

ಈ ಚಿತ್ರಕ್ಕೆ ರಚನೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಡೀಲ್‌ಮುರಳಿ. ರಚಿಕಾ ಹಾಗೂ ಡಯಾನಾ ಎಂಬಿಬ್ಬರು ನಾಯಕಿಯರಾಗಿದ್ದಾರೆ. ತಾಯಿ ಪಾತ್ರದಲ್ಲಿ ಗಂಗಮ್ಮ, ಖಳ ನಟರಾಗಿ ರಾಜ್‌ಕಾಂತ್, ವಿನಯ್‌ಕುಮಾರ್. ವಿ.ನಾಯಕ್, ಮಂತ್ರವಾದಿಯಾಗಿ ದಿವಾಕರ್, ಹರೀಶ್, ಪ್ರಸನ್ನ, ಮುರಳಿ, ಮನೋಜ್, ಸುನಿಲ್ ಮುಂತಾದವರು ಸಿನಿಮಾದಲ್ಲಿದ್ದಾರೆ. ಬಿಡದಿ, ರಾಮನಗರ, ಮಂಡ್ಯಾ, ಮೈಸೂರು ಹೆದ್ದಾರಿ ರಸ್ತೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಹಾಗಾದರೆ ಏನಿದು ರಾತ್ರೋರಾತ್ರಿ ಸಿನಿಮಾ? ‘ಟೆಂಪೋ ಚಾಲಕನಾಗಿರುವ ಆತನಿಗೆ ಅಮ್ಮನ ಆರೋಗ್ಯ ಸರಿ ಇಲ್ಲವೆಂದು, ಇದಕ್ಕಾಗಿ 50000 ವೆಚ್ಚವಾಗುತ್ತದೆಂದು ಆಸ್ಪತ್ರೆಯಿಂದ ಕರೆ ಬರುತ್ತದೆ. ಯಾರಿಂದಲೂ ಸಹಾಯವಾಗದೆ ದೇವರ ಮೊರೆ ಹೋಗುತ್ತಾನೆ. ನಂತರ ಪರಿಚಯದವನೊಬ್ಬ ಬಂದು ಒಂದು ಹೆಣವನ್ನು ಹೇಳಿದ ಸ್ಥಳಕ್ಕೆ ಸಾಗಿಸಿದರೆ ನೀನು ಕೇಳುವ ಹಣ ನೀಡುವುದಾಗಿ ತಿಳಿಸುತ್ತಾನೆ. ಅದರಂತೆ ಬಾಡಿಯನ್ನು ತೆಗೆದುಕೊಂಡು ಹೋಗುವಾಗ, ಅದು ಊರನ್ನು ಬಿಡದೆ ಗಾಡಿಗೆ ತೊಂದರೆ ಕೊಡುತ್ತದೆ. ಅದು ಏಕೆ, ಆಕೆ ಯಾರು? ಆಕೆಯ ಸಾವಿಗೆ ಕಾರಣವೇನು? ಎಂಬುದು ಸನ್ನಿವೇಶಗಳ ಮೂಲಕ ತೆರೆದುಕೊಳ್ಳುತ್ತದೆ.

ಟೆಕ್ಕಿ ಶ್ರೀಧರ್‌ ನರಸಿಂಹನ್ ಅಮ್ಮನ ಕುರಿತ ಹಾಡಿಗೆ ಸಾಹಿತ್ಯ, ಸಂಗೀತ ಸಂಯೋಜಿಸಿ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಕಿರಣ್‌ ಗಜ, ಸಂಕಲನ ಸೋಲೋಮನ್, ಸಾಹಸ ಆಕ್ಷನ್‌ಮೂರ್ತಿ ಮಾಡಿದ್ದಾರೆ. ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ವಾಲ್ಮೀಖಿ ಬ್ರಹ್ಮಾನಂದ ಗುರೂಜಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರ ಜನವರಿ 14ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net