

ಬೆಂಗಳೂರು: ‘ಪೊಗರು’ ಚಿತ್ರದ ‘ಖರಾಬು’ ಹಾಡು ಸೂಪರ್ ಹಿಟ್ ಆಯಿತು, ಚಿತ್ರವು ಬೇರೆ ಭಾಷೆಗಳಿಗೆ ಡಬ್ ಆಯಿತು, ಕೊನೆಗೆ ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆಯಾಯಿತು ... ಇಷ್ಟೆಲ್ಲ ಆದರೂ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಯಾವಾಗ ‘ಪೊಗರು’ ವಿಷಯವಾಗಿ ರಶ್ಮಿಕಾ ಮೌನವಹಿಸಿದರೋ, ಆಗ ಅವರು
ಟ್ರೋಲ್ಗಳಿಗೆ ತುತ್ತಾದರು. ರಶ್ಮಿಕಾಗೆ ಕನ್ನಡದ ಮೇಲೆ ಪ್ರೀತಿ ಕಡಿಮೆಯಾಗಿದೆ, ಪರಭಾಷೆಗಳ ಮೇಲೆ ವ್ಯಾಮೋಹ ಹೆಚ್ಚಾಗಿದೆ ... ಅದೇ ಕಾರಣಕ್ಕೆ ಅವರು ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಮತ್ತು ಕನ್ನಡ ಚಿತ್ರಗಳ ಬಗ್ಗೆ ಮಾತಾಡುವುದೇ ಇಲ್ಲ ಎಂಬ ಮಾತುಗಳು ಕೇಳಿಬಂದವು. ಟ್ರೋಲ್ಗಳು ಹೆಚ್ಚಾಗುತ್ತಿದ್ದಂತೆಯೇ, ‘‘ಪೊಗರು’ ಬಿಡುಗಡೆಗೆ ಇನ್ನು ಮೂವತ್ತೇ ದಿನ ...’ ಎಂದು ರಶ್ಮಿಕಾ ಟ್ವೀಟ್ ಮಾಡಿ ಎಲ್ಲರ ಬಾಯಿಗೆ ಬೀಗ ಹಾಕಿದರು. ಆ ನಂತರ ಟ್ರೋಲ್ಗಳು ಸ್ವಲ್ಪ ಕಡಿಮೆಯಾದರೂ, ಕಾಟಾಚಾರಕ್ಕೆ ಟ್ವೀಟ್ ಮಾಡಿದ್ದಾರೆ ಎಂಬ ಆರೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ಅವರಿಂದ ಸಾಧ್ಯವಾಗಲಿಲ್ಲ. ಅದಿರಲಿ, ರಶ್ಮಿಕಾ ಯಾಕೆ ‘ಪೊಗರು’ ಚಿತ್ರದ ಬಗ್ಗೆ ಮಾತನಾಡುತ್ತಿಲ್ಲ? ಅವರ್ಯಾಕೆ ಚಿತ್ರದ ಮೊದಲ ಪತ್ರಿಕಾಗೋಷ್ಠಿಗೆ ಬರಲಿಲ್ಲ? ಎಂಬ ಪ್ರಶ್ನೆಗಳು ಸಹಜ. ಈ ಪ್ರಶ್ನೆಗಳನ್ನು ನಿರ್ದೇಶಕ ನಂದಕಿಶೋರ್ ಅವರ ಮುಂದಿಟ್ಟರೆ, ಹಾಗೇನಿಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. ‘ರಶ್ಮಿಕಾ ಖಂಡಿತ ಪ್ರಚಾರಕ್ಕೆ ಬರುತ್ತಾರೆ. ನಾವು ಅವರ ಜತೆಗೆ ಸಂಪರ್ಕದಲ್ಲಿದ್ದೇವೆ’ ಎನ್ನುತ್ತಾರೆ ನಂದಕಿಶೋರ್. ಈ ಕುರಿತು ಮಾತನಾಡುವ ಧ್ರುವ, ‘ರಶ್ಮಿಕಾ ತಮ್ಮದೇ ಕೆಲಸಗಳಲ್ಲಿ ಬಿಜಿಯಾಗಿರಬಹುದು. ಅದಕ್ಕೇ ಬಂದಿಲ್ಲ. ಮುಂದೆ ಬರಬಹುದು’ ಎಂದಿದ್ದಾರೆ.