

ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದೇನೋ ಆಯಿತು. ಆದರೆ, ಆ ಚಿತ್ರದ ಬಿಡುಗಡೆ ಯಾವಾಗ? ಈ ಕುತೂಹಲ ಬರೀ ರಶ್ಮಿಕಾಗೆ ಮಾತ್ರವಲ್ಲ, ಅವರ ಅಭಿಮಾನಿಗಳಿಗೂ ಇದೆ. ಈ ಪ್ರಶ್ನೆಗೆ ಈಗ ಕೊನೆಗೂ ಉತ್ತರ ಸಿಕ್ಕಿದೆ. ರಶ್ಮಿಕಾ ಅಭಿನಯದ ಮೊದಲ ಬಾಲಿವುಡ್ ಚಿತ್ರ ಮೇ 13ಕ್ಕೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ಲಾಕ್ಡೌನ್ ಮುಗಿದ ಮೇಲೆ, ಬಾಲಿವುಡ್ನಲ್ಲಿ ‘ಮಿಷನ್ ಮಜ್ನು’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದರು ರಶ್ಮಿಕಾ. ಸಿದ್ಧಾರ್ಥ್ ಮಲ್ಹೋತ್ರಾಗೆ ಅವರು ನಾಯಕಿಯಾಗಿ ಆಯ್ಕೆಯಾಗಿದ್ದರು.
ಚಿತ್ರದ ಚಿತ್ರೀಕರಣ ಮುಗಿಯುವುದಕ್ಕೆ ಮುನ್ನವೇ, ಅಮಿತಾಭ್ ಬಚ್ಚನ್ ಅಭಿನಯದ ‘ಗುಡ್ಬೈ’ ಎಂಬ ಇನ್ನೊಂದು ಚಿತ್ರದಲ್ಲಿ ನಟಿಸುವುದಕ್ಕೂ ರಶ್ಮಿಕಾಗೆ ಅವಕಾಶ ಸಿಕ್ಕಿತ್ತು. ಬಾಲಿವುಡ್ನಲ್ಲಿ ಅವಕಾಶಗಳೇನೂ ಕಡಿಮೆ ಇಲ್ಲ. ಆದರೆ, ಮೊದಲ ಚಿತ್ರದ ಬಿಡುಗಡೆಯ ಸುದ್ದಿಯೇ ಇರಲಿಲ್ಲ. ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, 2022ರ ಮೇ 13ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡದವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಸಹ ಹಾಕಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ನಿರ್ವಿುಸಲಾದ ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ರಶ್ಮಿಕಾ ಅಲ್ಲದೇ ಪರಮೀತ್ ಸೇಠಿ, ಜಾಕಿರ್ ಹುಸೇನ್ ಮುಂತಾದವರು ನಟಿಸಿದ್ದಾರೆ.