ಅಜಯ್ ದೇವಗನ್​ ರುದ್ರ ಸಿರೀಸ್​ನಲ್ಲಿ ರಾಶಿ ಖನ್ನಾ

Rudra
Published on

‘ರುದ್ರ: ದಿ ಏಜ್ ಆಫ್ ಡಾರ್ಕ್​ನೆಸ್’ನಲ್ಲಿ ನಟಿಸುವ ಮೂಲಕ ಮೊದಲ ಸಲ ಡಿಜಿಟಲ್ ವೇದಿಕೆ ಏರಿರುವ ಅಜಯ್ ದೇವಗನ್, ಈಗ ಆ ವೆಬ್ ಸಿರೀಸ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶೂಟಿಂಗ್ ಸಹ ಶುರುವಾಗಿರುವುದರಿಂದ ಹೊಸಹೊಸ ಪಾತ್ರಧಾರಿಗಳು ತಂಡ ಸೇರಿಕೊಳ್ಳುತ್ತಿದ್ದಾರೆ. ಇದೀಗ ‘ರುದ್ರ’ ವೆಬ್​ಸಿರೀಸ್​ನಲ್ಲಿ ಅಜಯ್​ಗೆ ನಾಯಕಿಯಾಗಿ ರಾಶಿ ಖನ್ನಾ ಆಯ್ಕೆಯಾಗಿದ್ದಾರೆ. ಈ ಮೂಲಕ ಎಂಟು ವರ್ಷಗಳ ಬಳಿಕ ಮತ್ತೆ ಬಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ ರಾಶಿ.

2013ರಲ್ಲಿ ‘ಮದ್ರಾಸ್ ಕೆಫೆ’ ಚಿತ್ರದೊಂದಿಗೆ ಸಿನಿಮಾ ಕೆರಿಯರ್ ಆರಂಭಿಸಿದ್ದ ರಾಶಿ, ಅದಾದ ಮೇಲೆ ದಕ್ಷಿಣದ ಸಿನಿಮಾಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡರು. ಈಗಲೂ ಇವರ ತಮಿಳು ಮತ್ತು ತೆಲುಗಿನ ನಾಲ್ಕೈದು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದರೆ, ಇನ್ನು ಕೆಲವು ಶೂಟಿಂಗ್ ಹಂತದಲ್ಲಿವೆ. ಹೀಗಿರುವಾಗಲೇ ‘ರುದ್ರ’ ವೆಬ್​ಸಿರೀಸ್ ಮೂಲಕ ಹಿಂದಿಗೆ ಕಮ್​​ಬ್ಯಾಕ್​ ಮಾಡುತ್ತಿದ್ದಾರೆ.

ಇದಲ್ಲದೆ, ‘ಫ್ಯಾಮಿಲಿ ಮ್ಯಾನ್’ ಖ್ಯಾತಿಯ ರಾಜ್ ಮತ್ತು ಡಿಕೆ ನಿರ್ದೇಶನದ ಹೊಸ ವೆಬ್​ಸಿರೀಸ್​ನಲ್ಲಿಯೂ ರಾಶಿ ನಟಿಸುತ್ತಿರುವ ಸುದ್ದಿ ಇದ್ದು, ಈ ಸರಣಿ ಮೂಲಕ ಶಾಹೀದ್ ಕಪೂರ್ ಡಿಜಿಟಲ್ ವೇದಿಕೆಗೆ ಎಂಟ್ರಿ ಕೊಡುತ್ತಿದ್ದಾರೆ. ‘ರುದ್ರ’ ವೆಬ್ ಸರಣಿಯು ‘ಲೂಥರ್’ ಸಿರೀಸ್​ನ ರಿಮೇಕ್. ರಾಜೇಶ್ ಮಾಪುಸ್ಕರ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಬಿಬಿಸಿ ಸ್ಟುಡಿಯೋ ಮತ್ತು ಅಪ್ಲಾಸ್ ಎಂಟರ್​ಟೈನ್​ವೆುಂಟ್ ಬಂಡವಾಳ ಹೂಡುತ್ತಿದೆ. ಅಜಯ್ ದೇವಗನ್, ಅತುಲ್ ಕುಲಕರ್ಣಿ, ಇಶಾ ಡಿಯೋಲ್ ಸೇರಿ ಹಲವರು ತಾರಾಗಣದಲ್ಲಿರುವ ಈ ಸರಣಿ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಸ್ಟ್ರೀಮ್ ಆಗಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net