

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಯಾವಾಗ ಓಟಿಟಿಗೆ ಎಂಟ್ರಿ ಕೊಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇತ್ತು. ಏಕೆಂದರೆ, ಅವರ ಸೀನಿಯರ್ ಮತ್ತು ಜ್ಯೂನಿಯರ್ಗಳೆಲ್ಲ ಓಟಿಟಿಯಲ್ಲಿ ಗುರುತಿಸಿಕೊಂಡಿದ್ದರೂ, ರಣವೀರ್ ಸಿಂಗ್ ಮಾತ್ರ ಇದುವರೆಗೂ ಯಾವುದೇ ವೆಬ್ಸೀರೀಸ್ ಅಥವಾ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿರಲಿಲ್ಲ.
ಈಗ ಅದಕ್ಕೂ ಮುಹೂರ್ತ ಬಂದಿದೆ. ನೆಟ್ಫ್ಲಿಕ್ಸ್ಗಾಗಿ ಬೇರ್ ಗ್ರಿಲ್ಸ್ ನಡೆಸಿಕೊಡುತ್ತಿರುವ ಒಂದು ವಿಶೇಷ ಕಾರ್ಯಕ್ರಮದಲ್ಲಿ ರಣವೀರ್ ಭಾಗವಹಿಸಲಿದ್ದಾರೆ. ಜುಲೈ ಮತ್ತು ಆಗಸ್ಟ್ನಲ್ಲಿ ಸೈಬೀರಿಯಾದಲ್ಲಿ ನಡೆಯುವ ಈ ನಾನ್-ಫಿಕ್ಷನ್ ಕಾರ್ಯಕ್ರಮದ ಚಿತ್ರೀಕರಣದಲ್ಲಿ ರಣವೀರ್ ಭಾಗವಹಿಸಲಿದ್ದಾರೆ ಎಂಬ ಸುದ್ದಿಯೊಂದು ಬಂದಿದೆ.
ಈ ಬೇರ್ ಗ್ರಿಲ್ಸ್ ಯಾರು ಗೊತ್ತಲ್ಲ? ಮೂಲತಃ ಬ್ರಿಟಿಷ್ ಸಾಹಸಿಯಾಗಿರುವ ಗ್ರಿಲ್ಸ್, ಕಾಡುಮನುಷ್ಯನೆಂದೇ ಜನಪ್ರಿಯ. ಜಗತ್ತಿನ ಅಭಯಾರಣ್ಯಗಳಿಗೆ ಭೇಟಿ ಕೊಡುವ ಗ್ರಿಲ್ಸ್ ಅಲ್ಲಿ ಅಪರೂಪದ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ. ಹಲವು ಪ್ರಾಣಿ-ಪಕ್ಷಿಗಳನ್ನು ಪರಿಚಯಿಸುತ್ತಿರುತ್ತಾರೆ. ಅವರ 'ಇನ್ಟು ದಿ ವೈಲ್ಡ್' ಕಾರ್ಯಕ್ರಮವು ಬಹಳ ಜನಪ್ರಿಯವಾಗಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಜನಿಕಾಂತ್, ಅಕ್ಷಯ್ ಕುಮಾರ್ ಮುಂತಾದವರು ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಂದಿರಾ ಬೇಡಿ ಪತಿ ರಾಜ್ ಕೌಶಲ್ ಹೃದಯಾಘಾತದಿಂದ ನಿಧನ
ಈಗ ಗ್ರಿಲ್ಸ್ ಇನ್ನೊಂದು ಹೊಸ ಕಾರ್ಯಕ್ರಮ ರೂಪಿಸಿದ್ದು, ನೆಟ್ಫ್ಲಿಕ್ಸ್ಗಾಗಿ ಅದನ್ನು ಮಾಡಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಣವೀರ್ ಸಿಂಗ್ ಸರಿ ಎಂದು ಪರಿಗಣಿಸಲಾಗಿದ್ದು, ಅವರು ಸಹ ಒಪ್ಪಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣಕ್ಕೆ ಸಿದ್ಧತೆ ನಡೆದಿದ್ದು, ಜುಲೈನಿಂದ ಅಧಿಕೃತವಾಗಿ ಚಿತ್ರೀಕರಣ ನಡೆಯಲಿದೆ.