

ಮುಂಬೈ: ರಣಬೀರ್ ಕಪೂರ್ ಅಭಿನಯದ ಬಾಲಿವುಡ್ ನಟ ಸಂಜಯ್ ದತ್ ಅವರ ಬಯೋಪಿಕ್ 'ಸಂಜು' ಚಿತ್ರವು ಬಿಡುಗಡೆಯಾಗಿ ಮೂರು ವರ್ಷಗಳಾಗಿವೆ. 2018ರ ಜೂನ್ 29ರಂದು ಈ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಿ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಸಂಜಯ್ ದತ್ ಅವರನ್ನು ತೀರಾ ಸಾಚಾ ಎಂದು ತೋರಿಸಲಾಗಿದೆ ಎಂಬ ಅಪಸ್ವರಗಳ ನಡುವೆಯೂ, ಚಿತ್ರ ಬೇರೆಬೇರೆ ಕಾರಣಗಳಿಗಾಗಿ ಹಿಟ್ ಆಗಿತ್ತು.
ಇದನ್ನೂ ಓದಿ: ಮಂದಿರಾ ಬೇಡಿ ಪತಿ ರಾಜ್ ಕೌಶಲ್ ಹೃದಯಾಘಾತದಿಂದ ನಿಧನ
ಚಿತ್ರ ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ, ಚಿತ್ರತಂಡದಿಂದ ಒಂದು ಹೊಸ ವಿಷಯ ಬೆಳಕಿಗೆ ಬಂದಿದೆ. ಅದೇನೆಂದರೆ, ಚಿತ್ರದಲ್ಲಿ ಸಂಜಯ್ ದತ್ ಅವರ ಪಾತ್ರವನ್ನು ನಟ ಪರೇಶ್ ರಾವಲ್ ಮಾಡಿದ್ದರು. ಮುಂಚೆ ಆ ಪಾತ್ರಕ್ಕೆ ಪರೇಶ್ ಬದಲು ಆಮೀರ್ ಖಾನ್ ಅವರಿಗೆ ಆಫರ್ ಮಾಡಲಾಗಿತ್ತಂತೆ. ಆದರೆ, ಆಮೀರ್ ಆ ಪಾತ್ರವನ್ನು ನಿರಾಕರಿಸಿದ್ದರಿಂದ ಪರೇಶ್ ರಾವಲ್ ಅವರಿಗೆ ನೀಡಲಾಯಿತು ಎಂದು ನಿರ್ದೇಶಕ ರಾಜಕುಮಾರ್ ಹಿರಾನಿ ಹೇಳಿಕೊಂಡಿದ್ದಾರೆ.
'ಸಂಜು' ಚಿತ್ರಕ್ಕೂ ಮುನ್ನ ಆಮೀರ್ ಖಾನ್ ಮತ್ತು ರಾಜಕುಮಾರ್ ಹಿರಾನಿ ಇಬ್ಬರೂ '3 ಈಡಿಯಟ್ಸ್' ಮತ್ತು 'ಪಿಕೆ' ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಈ ಚಿತ್ರದಲ್ಲೂ ಆಮೀರ್ ಇದ್ದರೆ ಚೆನ್ನ ಎಂದು ಹಿರಾನಿ ಅವರಿಗೆ ಅನಿಸಿತ್ತಂತೆ. ಆದರೆ, ಅದಾಗಲೇ ಸಂಜು ಪಾತ್ರಕ್ಕೆ ರಣಬೀರ್ ಕಪೂರ್ ಗೊತ್ತಾಗಿದ್ದರು. ಇನ್ನು, ಚಿತ್ರದಲ್ಲಿರುವ ಇನ್ನೊಂದು ಮುಖ್ಯ ಪಾತ್ರವೆಂದರೆ ಅದು ಸಂಜು ತಂದೆ ಸುನೀಲ್ ದತ್ ಅವರದ್ದು. ಈ ಪಾತ್ರವನ್ನು ಮಾಡುವುದಕ್ಕೆ ಆಮೀರ್ ಖಾನ್ಗೆ ಆಫರ್ ನೀಡಲಾಯಿತಂತೆ. ಆದರೆ, ಆ ಪಾತ್ರವನ್ನು ಆಮೀರ್ ನಿರಾಕರಿಸಿದ್ದಾರೆ.
ಅದಕ್ಕೆ ಕಾರಣವೂ ಇದೆ. ಆಮೀರ್ಗೆ ಸಂಜು ಪಾತ್ರವನ್ನು ಮಾಡುವುದಕ್ಕೆ ಬಹಳ ಆಸೆ ಇತ್ತಂತೆ. ಆದರೆ, ಅಷ್ಟರಲ್ಲಾಗಲೇ ಆ ಪಾತ್ರ ರಣಬೀರ್ ಅವರದ್ದಾಗಿತ್ತು. ಸುನೀಲ್ ದತ್ ಅವರ ಪಾತ್ರ ಮಾಡುವುದಕ್ಕೆ ಆಸೆ ಇದ್ದರೂ, ಮುಂದೆ ಬರೀ ಹಿರಿಯನ ಪಾತ್ರಕ್ಕೆ ಬ್ರಾಂಡ್ ಆಗುವ ಭಯ ಅವರಿಗಿತ್ತಂತೆ. ಅಷ್ಟರಲ್ಲಾಗಲೇ, 'ದಂಗಲ್' ಚಿತ್ರದಲ್ಲಿ ಇಬ್ಬರು ಹೆಣ್ಮಕ್ಕಳ ತಂದೆಯ ಪಾತ್ರದಲ್ಲಿ ಆಮೀರ್ ನಟಿಸಿದ್ದರು. ಪುನಃ 'ಸಂಜು' ಚಿತ್ರದಲ್ಲೂ ತಂದೆಯ ಪಾತ್ರವನ್ನೇ ನಿರ್ವಹಿಸಿದರೆ, ಆ ತರಹದ ಪಾತ್ರಗಳಿಗೆ ಬ್ರಾಂಡ್ ಆಗುವ ಭಯವಿದ್ದರಿಂದ ಆಮೀರ್ ನಿರಾಕರಿಸಿದ್ದಾರೆ. ಆಮೀರ್ ನೋ ಎಂದ ಮೇಲೆ, ಆ ಪಾತ್ರ ಪರೇಶ್ ರಾವಲ್ ಒಪ್ಪಿಕೊಂಡಿದ್ದರು. ಆ ಪಾತ್ರವು ಅವರಿಗೆ ಇನ್ನಷ್ಟು ಹೆಸರು ತಂದುಕೊಟ್ಟಿತ್ತು ಎನ್ನುವುದು ವಿಶೇಷ.