ಗೋಲ್ಡನ್ ಟೆಂಪಲ್​ನಲ್ಲಿ ರಣದೀಪ್ ಹೂಡಾ ಕ್ಷಮೆ ಕೇಳಿದ್ದು ಏಕೆ?

Randeep Hooda - Final
Published on

ಮುಂಬೈ: ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾದ ದಿ ಎಕ್ಸ್​ಟ್ರಾಕ್ಷನ್​ ಎಂಬ ಹಾಲಿವುಡ್​ ಚಿತ್ರದಲ್ಲಿ ಬಾಲಿವುಡ್​ ನಟ ರಣದೀಪ್​ ಹೂಡಾ ನಟಿಸಿದ್ದು ಗೊತ್ತೇ ಇದೆ. ಈ ಚಿತ್ರದಲ್ಲಿ ನಟಿಸಿದ ನಂತರ ರಣದೀಪ್​, ಅಮೃತಸರದಲ್ಲಿನ ಗೋಲ್ಡನ್​ ಟೆಂಪಲ್​ನಲ್ಲಿ ಕ್ಷಮೆ ಕೇಳಿದ್ದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಇಷ್ಟಕ್ಕೂ ರಣದೀಪ್​, ಗುರುದ್ವಾರದಲ್ಲಿ ಕ್ಷಮೆ ಕೇಳಿದ್ದು ಏಕೆ?

ದಿ ಎಕ್ಸ್​ಟ್ರಾಕ್ಷನ್ ಚಿತ್ರದಲ್ಲಿ ನಟಿಸುವುದಕ್ಕಿಂತ ಮುನ್ನ ರಣದೀಪ್​, ಸಾರಾಗ್ರಹಿ ಕದನದ ಕುರಿತಾದ ಒಂದು ಚಿತ್ರದಲ್ಲಿ ನಟಿಸಬೇಕಿತ್ತಂತೆ. ಅದರಲ್ಲಿನ ತಮ್ಮ ಪಾತ್ರಕ್ಕಾಗಿ ಉದ್ದಕೂದಲು ಮತ್ತು ಗಡ್ಡ ಬಿಟ್ಟಿದ್ದರಂತೆ. ಸಿನಿಮಾ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಕೂದಲು ಮತ್ತು ಗಡ್ಡ ಕತ್ತರಿಸುವುದಿಲ್ಲ ಎಂದು ಹೇಳಿದ್ದರಂತೆ.

ಆದರೆ, ಅದೆಷ್ಟೇ ಕಾದರೂ, ಸಿನಿಮಾ ಮಾತ್ರ ಪ್ರಾರಂಭವಾಗಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಚಿತ್ರ ನಿಧಾನವಾಗುತ್ತಲೇ ಹೋಯಿತಂತೆ. ಅಷ್ಟೇ ಅಲ್ಲ, ಒಂದು ಹಂತದಲ್ಲಿ ಚಿತ್ರ ಮುಂದುವರೆಯುವುದು ಸಾಧ್ಯವೇ ಇಲ್ಲ ಎಂದನಿಸಿತಂತೆ ರಣದೀಪ್​ ಹೂಡಾಗೆ. ಇಂಥ ಸಂದರ್ಭದಲ್ಲಿ ಅವರಿಗೆ ದಿ ಎಕ್ಸ್​ಟ್ರಾಕ್ಷನ್ ಚಿತ್ರದಲ್ಲಿ ನಟಿಸುವುದಕ್ಕೆ ಆಫರ್​ ಬಂದಿದೆ. ಹೇಳಿಕೇಳಿ, ಅದೊಂದು ಹಾಲಿವುಡ್​ ಚಿತ್ರ. ಇನ್ನೂ ಕಾಯುತ್ತಾ ಕೂತರೆ, ಅವಕಾಶ ಕೈತಪ್ಪಿ ಹೋಗುತ್ತದೆ ಎಂದು ಆ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಕೂದಲು ಕತ್ತರಿಸಿದ್ದಾರೆ.

ಆಡಿದ ಮಾತಿಗೆ ವಿರುದ್ಧವಾಗಿ ಕೂದಲು ತೆಗೆದಿದ್ದಿಕ್ಕೆ ಅವರು ಅಮೃತಸರದ ಗೋಲ್ಡನ್​ ಟೆಂಪಲ್​ಗೆ ಹೋಗಿ ಕ್ಷಮೆ ಕೇಳಿದ್ದಾರೆ. ಸಾರಾಗ್ರಹಿ ಕದನದ ಕುರಿತು ರಣದೀಪ್​ ಹೂಡಾ ಚಿತ್ರ ಮಾಡುವುದಕ್ಕೆ ಸಾಧ್ಯವಾಗದಿದ್ದರೂ, ಅದೇ ಕಥೆಯನ್ನಿಟ್ಟುಕೊಂಡು ಅಕ್ಷಯ್​ ಕುಮಾರ್​, ಕೇಸರಿ ಎಂಬ ಚಿತ್ರ ಮಾಡಿದರು. ಇದಲ್ಲದೆ, ಮೋಹಿತ್​ ರೈನಾ ಅಭಿನಯದಲ್ಲಿ ವೆಬ್​ ಸೀರೀಸ್​ ಸಹ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net