ಆ ಎರಡು ಮುಖಗಳು; 'ರಣವ್ಯೂಹ' ಚಿತ್ರದ ಟ್ರೇಲರ್ ಬಿಡುಗಡೆ

Ranavyuha - Final
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ’ಚಕ್ರವ್ಯೂಹ’ ಮತ್ತು ’ಪದ್ಮವ್ಯೂಹ’ ಚಿತ್ರಗಳು ಬಿಡುಗಡೆಯಾಗಿವೆ. ಈಗ ’ರಣವ್ಯೂಹ’ ಎಂಬ ಇನ್ನೊಂದು ಚಿತ್ರವು ಸದ್ದಿಲ್ಲದೆ ನಿರ್ಮಾಣವಾಗಿದ್ದು, ಇತ್ತೀಚೆಗೆ ಟ್ರೇಲರ್ ಹಾಗೂ ಹಾಡುಗಳು ಬಿಡುಗಡೆಯಾಗಿವೆ.

'ರಣವ್ಯೂಹ' ಚಿತ್ರದ ಟ್ರೇಲರ್​ ಮತ್ತು ಹಾಡುಗಳನ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಬಿಡುಗಡೆ ಮಾಡಿದರು. ಶ್ರೀ ಶಿರಡಿ ಸಾಯಿ ಮೂವೀಸ್ ಬ್ಯಾನರ್ ಅಡಿಯಲ್ಲಿ ವೇಣುಕುಮಾರ್.ಎಂ.ಜಿ ಬಂಡವಾಳ ಹೂಡಿದ್ದು, ಎಸ್.ಎಸ್.ಶಂಕರ್‌ನಾಗ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಅವರು, 'ಒಬ್ಬ ಮನುಷ್ಯನನ್ನು ಮೇಲ್ನೋಟಕ್ಕೆ ಒಳ್ಳೆಯವನು, ಕೆಟ್ಟವನು ಅಂತ ಹೇಳಲಾಗುವುದಿಲ್ಲ. ಹೊರಗೆ ಒಂದು ಮುಖ ಇರುತ್ತದೆ. ಒಳಗೆ ಇನ್ನೊಂದು ಮುಖವಿರುತ್ತದೆ. ಆಳವಾಗಿ ನೋಡಿದಾಗಲಷ್ಟೇ ನಿಜವಾದ ಮುಖ ಗೋಚರಿಸುತ್ತದೆ. ಈ ವಿಷಯವನ್ನು ಕಮರ್ಷಿಯಲ್​ ಶೈಲಿಯಲ್ಲಿ, ಸೆಸ್ಪೆನ್ಸ್, ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ' ಎನ್ನುತ್ತಾರೆ ಶಂಕರ್​ ನಾಗ್​.

ಈ ಹಿಂದೆ 'ಮಜಾಭಾರತ' ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಮತ್ತು ಜ್ಯೂನಿಯರ್​ ದರ್ಶನ್​ ಎಂದೇ ಜನಪ್ರಿಯರಾಗಿದ್ದ ಅವಿನಾಶ್​ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅವರಿಗೆ ನಾಯಕಿಯಾಗಿ ಯಶಾ ಅಭಿನಯಿಸಿದ್ದಾರೆ. ನಿರ್ಮಾಪಕರ ಪತ್ನಿ ಸ್ಮಿತಾ ತನಿಖಾಧಿಕಾರಿಯಾಗಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಅವೀನ್, ಅಕ್ಷತ್, ವಿಸ್ಮಿತ್‌ರಾಜ್, ರಾಜ್‌ಮಂಜು, ಪ್ರೇಮ್‌ಕನ್ನಡರಾಜು, ರಾಜ್‌ಪ್ರತೀಕ್, ಯರ್ರಾಬಿರ್ರಿ ರಂಗರಾಜ್ ಮುಂತಾದವರು ನಟಿಸಿದ್ದಾರೆ.

'ರಣವ್ಯೂಹ' ಚಿತ್ರದ ಮೂರು ಹಾಡುಗಳಿಗೆ ಕಾರ್ತಿಕ್‌ ವೆಂಕಟೇಶ್ ಸಂಗೀತ ಸಂಯೋಜಿಸಿದ್ದಾರೆ. ಕೃಷ್ಣನಾಯ್ಕರ್ ಛಾಯಾಗ್ರಹಣ, ಪ್ರವೀಣ್‌ರಾಜ್ ಸಂಕಲನ ಈ ಚಿತ್ರಕ್ಕಿದ್ದು, ಬೆಂಗಳೂರು, ಉಡುಪಿ,ಮಂಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net