

ಬೆಂಗಳೂರು: ‘ಒಂದು ಶಿಕಾರಿಯ ಕಥೆ’ ಎಂಬ ಚಿತ್ರದ ಮೂಲಕ ಈಗಾಗಲೇ ಹೀರೋ ಆಗಿದ್ದಾರೆ ಪ್ರಮೋದ್ ಶೆಟ್ಟಿ. ಅದಾದ ನಂತರ ಅವರು ‘ಲಾಫಿಂಗ್ ಬುದ್ಧ’ ಎಂಬ ಹೆಸರಿನ ಚಿತ್ರದಲ್ಲೂ ನಟಿಸುತ್ತಿರುವ ಸುದ್ದಿ ಇತ್ತು. ಆ ಚಿತ್ರ ಶುರುವಾಗುವ ಮುನ್ನವೇ ಪ್ರಮೋದ್ ಶೆಟ್ಟಿ ಹೀರೋ ಆಗಿ ಅಭಿನಯಿಸುತ್ತಿರುವ ಇನ್ನೊಂದು ಚಿತ್ರ ಸೆಟ್ಟೇರಲಿದೆ. ಅದೇ ‘ಕಾಶಿಯಾತ್ರೆ’. ಮುಂದಿನ ಸೋಮವಾರದಿಂದ (ಸೆ.12) ಚಿತ್ರೀಕರಣ ಸಹ ಪ್ರಾರಂಭವಾಗಲಿದೆ. ಈ ಹಿಂದೆ, ‘ಕಾಲ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದ ವಿನಯ್ ಶಾಸ್ತ್ರಿ, ಈ ಚಿತ್ರಕ್ಕೆ ಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ.
‘ಕಾಶಿಯಾತ್ರೆ’ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡುವ ವಿನಯ್, ‘ಇದು ಸಂಪೂರ್ಣ ಮದುವೆ ಕಥೆಯಲ್ಲ. ಮದುವೆ ಇಲ್ಲಿ ಒಂದು ಅಂಶ ಅಷ್ಟೇ. ಒಟ್ಟಾರೆ ಪ್ರಮೋದ್ ಶೆಟ್ಟಿ, ಕಾಶಿಯಾತ್ರೆಗೆ ಹೊರಟು ನಿಂತಿದ್ದಾರೆ. ಅವರ ಮದುವೆಯಾಗುತ್ತದಾ? ಆದರೂ ಏನಾಗುತ್ತದೆ? ಎಂಬುದರ ಸುತ್ತ ಕಥೆ ಸುತ್ತುತ್ತದೆ. ಇಲ್ಲಿ ಪ್ರಮೋದ್ ಅವರ ತಂದೆಯಾಗಿ ಹಿರಿಯ ನಟ-ನಿರ್ದೇಶಕ ಟಿ.ಎಸ್. ನಾಗಾಭರಣ ನಟಿಸುತ್ತಿದ್ದಾರೆ. ಮಗನಿಗೆ ಕಿರಿಕಿರಿ ಮಾಡುವ ವಿಭಿನ್ನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ.
‘ಕಾಶಿಯಾತ್ರೆ’ ಚಿತ್ರವನ್ನು ಗನ್ನಿಬ್ಯಾಗ್ ಸ್ಟುಡಿಯೋಸ್ನಡಿ ನಿರ್ಮಾಣ ಮಾಡಲಾಗುತ್ತಿದೆ. ಪ್ರಮೋದ್ಗೆ ನಾಯಕಿಯಾಗಿ ಸ್ವರಾ ಶೆಟ್ಟಿ ನಟಿಸುತ್ತಿದ್ದಾರೆ.