83 ಪ್ರಯಾಣ ಸುಗಮವಾಗಿರಲಿಲ್ಲ; ಚಿತ್ರದ ತಯಾರಿ ಬಗ್ಗೆ ರಣವೀರ್ ಮಾತು

Sudeep
Published on

ಬೆಂಗಳೂರು: ಕಬೀರ್ ಖಾನ್ ನಿರ್ದೇಶನದ ‘83’ ಸಿನಿಮಾ ಇನ್ನೇನು ಚಿತ್ರಮಂದಿರಕ್ಕೆ ಆಗಮಿಸಲು ಕೇವಲ ನಾಲ್ಕು (ಡಿ. 24) ದಿನಗಳಷ್ಟೇ ಬಾಕಿ. ಆ ಹಿನ್ನೆಲೆಯಲ್ಲಿ ಇಡೀ ತಂಡ ಬೆಂಗಳೂರಿನಲ್ಲಿ ಠಿಕಾಣಿ ಹೂಡಿತ್ತು. ಸಿನಿಮಾ ಬಗ್ಗೆ ಮಾತನಾಡುವುದಷ್ಟೇ ಅಲ್ಲದೆ, ಒಂದಷ್ಟು ಕನಸುಗಳ ಸಾಕಾರಕ್ಕೂ ಈ ವೇದಿಕೆ ಅವಕಾಶ ಕಲ್ಪಿಸಿಕೊಟ್ಟಿತು.

ಕಪಿಲ್ ದೇವ್ ಮತ್ತು ರಣವೀರ್ ಸಿಂಗ್ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ರಾಜ್ಯಕ್ಕೆ ಬಂದ ಅತಿಥಿಗಳನ್ನು ಕಿಚ್ಚ ಸುದೀಪ್ ಅಷ್ಟೇ ಆತ್ಮೀಯವಾಗಿ ಬರಮಾಡಿಕೊಂಡು, ‘ಕನ್ನಡದಲ್ಲಿ ‘83’ ಚಿತ್ರವನ್ನು ಅರ್ಪಿಸುತ್ತಿರುವುದು ಒಬ್ಬ ನಟನಾಗಿ, ಕ್ರಿಕೆಟ್ ಪ್ರೇಮಿಯಾಗಿ ಹೆಮ್ಮೆಯ ವಿಚಾರ’ ಎಂದರು. ಅಷ್ಟೇ ಅಲ್ಲ, ‘83’ ಚಿತ್ರದ ಡೈಲಾಗ್​ಗಳ ಕನ್ನಡ ಅವತರಣಿಕೆಯನ್ನೂ ರಣವೀರ್ ಬಾಯಿಂದ ಕೇಳುವಂತಾಯಿತು. ಬಳಿಕ ಒಂದಾದ ನಂತರ ಮತ್ತೊಂದು ವಿಚಾರಗಳು ಮುನ್ನೆಲೆಗೆ ಬಂದವು. ಚಿತ್ರ ಮೂಡಿ ಬಂದ ರೀತಿಯಿಂದ ಹಿಡಿದು, ಅದಕ್ಕೆ ನಡೆಸಿದ ತಯಾರಿಯನ್ನೂ ‘ಕರುನಾಡ ಅಳಿಯ’ ರಣವೀರ್ ಹೇಳುತ್ತ ಹೋದರು.

ನೂರು ಜನ್ಮ ಎತ್ತಿದರೂ ಮತ್ತೆ ಇಂಥ ಚಿತ್ರವಾಗಲ್ಲ: ಕಲಾವಿದರಿಗೆ ನಟಿಸುವ ಪ್ರತಿ ಚಿತ್ರವೂ ಒಂದೊಂದು ಹೊಸ ಅನುಭವ ಕೊಡುತ್ತದೆ. ನಾನು ನೂರು ಜನ್ಮ ಎತ್ತಿದರೂ, ಇಂಥ ಸಿನಿಮಾ ಆಗುವುದು ಒಂದೇ ಸಲ. ಅದು ಈಗ ನೆರವೇರಿದೆ. ನಿಜಕ್ಕೂ ಹೆಮ್ಮೆ ಅನಿಸುತ್ತದೆ. ಈ ಚಿತ್ರ ನೋಡಲು ತುಂಬ ಸಲೀಸು ಅನಿಸಬಹುದು.. ಆದರೆ, ಇದರ ಹಿಂದೆ ದೊಡ್ಡ ಶ್ರಮ ಇದೆ. ಸತತ ನಾಲ್ಕು ತಿಂಗಳು ತರಬೇತಿ ಪಡೆದಿದ್ದೇನೆ. ನಿತ್ಯ ನಾಲ್ಕು ತಾಸು ಮೈದಾನದಲ್ಲಿ ಬ್ಯಾಟ್ ಬೀಸಿದ್ದೇನೆ. ಬೌಲಿಂಗ್ ಮಾಡಿದ್ದೇನೆ. ಹಲವು ತಾಸು ಮೇಕಪ್ ಮಾಡಿಸಿಕೊಂಡಿದ್ದೇನೆ. ಕೊನೆಗೆ ಚಿತ್ರದಲ್ಲಿ ರಿಯಲ್ ವಿಶ್ವಕಪ್ ಎತ್ತಿ ಹಿಡಿದಿದ್ದೇನೆ. ನನ್ನ ಜೀವನದ ಅತ್ಯಮೂಲ್ಯ ಗಳಿಗೆ ಅದು’ ಎನ್ನುತ್ತಾರವರು.

ಬಯೋಪಿಕ್​ಗೆ ನಾನ್ ಯಾವಾಗ್ಲೋ ರೆಡಿ: ಸುದೀಪ್ ಕ್ರಿಕೆಟ್ ಆಟಗಾರ ಮತ್ತು ಪ್ರೇಮಿ. ಹಾಗಾಗಿ, ದ್ರಾವಿಡ್ ಕುರಿತ ಬಯೋಪಿಕ್ ಮಾತೂ ಸುದ್ದಿಗೋಷ್ಠಿಯಲ್ಲಿ ತೇಲಿಬಂತು. ‘ನಾನು ದ್ರಾವಿಡ್ ಸಿನಿಮಾ ಮಾಡಲು ಯಾವತ್ತೋ ರೆಡಿ. ನಿರ್ದೇಶಕರೂ ಇಲ್ಲೇ ಇದ್ದಾರೆ, ನಿರ್ಮಾಪಕರೂ ಇಲ್ಲೇ ಇದ್ದಾರೆ. ಅವರಿಂದ ಸಮ್ಮತಿ ಸಿಕ್ಕರೆ ಶುರುಮಾಡುವುದೇ’ ಎಂದರು. ಕಿಚ್ಚನ ಮಾತಿಗೆ ‘ಅದೂ ಆಗಿಯೇ ಬಿಡಲಿ. ಕಥೆ ರೆಡಿಯಾಗಿದೆ’ ಎಂದ ಕಬೀರ್ ಖಾನ್ ಮಾತಿಗೆ, ‘ಈ ಸಿನಿಮಾದಲ್ಲಿ ನನಗೂ ಪಾತ್ರ ಇದೆಯೇ’ ಎಂದರು ರಣವೀರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net