'ಉತ್ತರಕಾಂಡ' ಚಿತ್ರದಲ್ಲಿ ಧನಂಜಯ್​ಗೆ ರಮ್ಯಾ ನಾಯಕಿ; ಮುಹೂರ್ತದಲ್ಲಿ ಭಾಗಿ

Uttarakaanda 1
Published on

ಬೆಂಗಳೂರು: ಧನಂಜಯ್​ ಅಭಿನಯದ 'ಉತ್ತರಕಾಂಡ' ಚಿತ್ರದಲ್ಲಿ ಧನಂಜಯ್​ಗೆ ನಾಯಕಿಯಾಗಿ ರಮ್ಯಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿ ಕೆಲವು ದಿನಗಳಿಂದ ಓಡಾಡುತ್ತಿತ್ತು. ಅದೀಗ ನಿಜವಾಗಿದೆ. ಈ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ರಮ್ಯಾ ಚಿತ್ರರಂಗಕ್ಕೆ ರೀಎಂಟ್ರಿ ಕೊಡುತ್ತಿದ್ದಾರೆ.

'ಉತ್ತರಕಾಂಡ' ಚಿತ್ರದ ಮುಹೂರ್ತ ಭಾನುವಾರ ಮಧ್ಯಾಹ್ನ ನಡೆಯಿತು. ಈ ಸಂದರ್ಭದಲ್ಲಿ ರಮ್ಯಾ ಕೂಡಾ ಹಾಜರಿದ್ದರು. ಈ ಮೂಲಕ ಚಿತ್ರದಲ್ಲಿ ನಟಿಸುತ್ತಿರುವುದು ನಿಜ ಎಂದು ಸ್ಪಷ್ಟಪಡಿಸಿದರು.

ಪ್ರಮುಖವಾಗಿ, ಇದಕ್ಕೂ ಮೊದಲು ರಮ್ಯಾ, 'ಸ್ವಾತಿ ಮುತ್ತಿನ ಮಳೆ ಹನಿಯೇ' ಎಂಬ ರಾಜ್​ ಬಿ. ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ಹೊಸಬರ ಚಿತ್ರಗಳನ್ನು ನಿರ್ಮಿಸುವುದಕ್ಕೆ ಹುಟ್ಟುಹಾಕಿರುವ ಸಂಸ್ಥೆಯಾದ್ದರಿಂದ, ಆ ಚಿತ್ರದಲ್ಲಿ ಹೊಸಬರು ಇರುತ್ತಾರೆ, ತಾನು ಇನ್ನೊಂದು ಚಿತ್ರದ ಮೂಲಕ ಬರುವುದಾಗಿ ಅವರು ಹೇಳಿಕೊಂಡಿದ್ದರು. ಹಾಗಿದ್ದರೆ, ರಮ್ಯಾ ಯಾವ ಚಿತ್ರದ ಮೂಲಕ ರೀ-ಎಂಟ್ರಿ ಕೊಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ಅದಕ್ಕೆ ಸರಿಯಾಗಿ, 'ಉತ್ತರಕಾಂಡ' ಚಿತ್ರದಲ್ಲಿ ರಮ್ಯಾ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿದ್ದು, ಅದೀಗ ನಿಜವಾಗಿದೆ.

ವಿಜಯ್ ಕಿರಗಂದೂರು ಅರ್ಪಿಸುತ್ತಿರುವ 'ಉತ್ತರಕಾಂಡ' ಚಿತ್ರವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯಡಿ ಕಾರ್ತಿಕ್ ಗೌಡ ಮತ್ತು ಯೋಗಿ.ಜಿ.ರಾಜ್ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಇನ್ನು, ರೋಹಿತ್​ ಪದಕಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಧನಂಜಯ್​ ಮತ್ತು ರೋಹಿತ್​ ಕಾಂಬಿನೇಷನ್​ನ ಎರಡನೆಯ ಚಿತ್ರವಾಗಿದ್ದು, ಇದಕ್ಕೂ ಮೊದಲು ಇಬ್ಬರೂ 'ರತ್ನನ್​ ಪ್ರಪಂಚ' ಚಿತ್ರ ಮಾಡಿದ್ದರು.

'ಉತ್ತರಕಾಂಡ' ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದು, ಅರವಿಂದ್​ ಕಶ್ಯಪ್​ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net