

ಬೆಂಗಳೂರು: ಧನಂಜಯ್ ಅಭಿನಯದ 'ಉತ್ತರಕಾಂಡ' ನಾಳೆ ಅಧಿಕೃತವಾಗಿ ಪ್ರಾರಂಭವಾಗಲಿದೆ. ಈ ಮಧ್ಯೆ, ಚಿತ್ರದಲ್ಲಿ ಧನಂಜಯ್ಗೆ ರಮ್ಯಾ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂಬ ಸುದ್ದಿಯೊಂದು ಗಾಂಧಿನಗರದಿಂದ ಅಲೆಅಲೆಯಾಗಿ ಕೇಳಿಬರುತ್ತಿದೆ.
'ಉತ್ತರಕಾಂಡ' ಚಿತ್ರದಲ್ಲಿ ರಮ್ಯಾ ನಿಜಕ್ಕೂ ನಾಯಕಿಯಾ? ಗೊತ್ತಿಲ್ಲ. ಅದನ್ನು ಅವರಾಗಲೀ, ಚಿತ್ರತಂಡದವರಾಗಲೀ ಅಧಿಕೃತವಾಗಿ ಘೋಷಿಸಿಲ್ಲ. ನಿಜಾಂಶ ಏನಿದ್ದರೂ ನಾಳೆ ಭಾನುವಾರ ಗೊತ್ತಾಗಲಿದೆ. ಆದರೆ, ಸದ್ಯಕ್ಕೆ ಈ ಸುದ್ದಿ ಓಡಾಡುತ್ತಿರುವುದಕ್ಕೂ ಕಾರಣವಿದೆ. ಈ ಚಿತ್ರಕ್ಕೆ ರಮ್ಯಾ ಅವರೇ ನಾಯಕಿಯಾಗಿ ನಟಿಸಬಹುದು ಎಂಬುದಕ್ಕೆ ಮೂರ್ನಾಲ್ಕು ಥಿಯರಿಗಳಿವೆ.
ಪ್ರಮುಖವಾಗಿ, ಇದಕ್ಕೂ ಮೊದಲು ರಮ್ಯಾ, 'ಸ್ವಾತಿ ಮುತ್ತಿನ ಮಳೆ ಹನಿಯೇ' ಎಂಬ ರಾಜ್ ಬಿ. ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ಹೊಸಬರ ಚಿತ್ರಗಳನ್ನು ನಿರ್ಮಿಸುವುದಕ್ಕೆ ಹುಟ್ಟುಹಾಕಿರುವ ಸಂಸ್ಥೆಯಾದ್ದರಿಂದ, ಆ ಚಿತ್ರದಲ್ಲಿ ಹೊಸಬರು ಇರುತ್ತಾರೆ, ತಾನು ಇನ್ನೊಂದು ಚಿತ್ರದ ಮೂಲಕ ಬರುವುದಾಗಿ ಅವರು ಹೇಳಿಕೊಂಡಿದ್ದಾರೆ. ಎರಡನೆಯ ಕಾರಣವೆಂದರೆ, ಒಂದು ದೊಡ್ಡ ನಿರ್ಮಾಣ ಸಂಸ್ಥೆ ಮತ್ತು ದೊಡ್ಡ ಕ್ಯಾನ್ವಸ್ನ ಚಿತ್ರದ ಮೂಲಕ ರೀಎಂಟ್ರಿ ಕೊಡಬೇಕು ಎಂಬುದು ರಮ್ಯಾ ಅವರ ಅಭಿಮತವಂತೆ. 'ಉತ್ತರಕಾಂಡ' ಅಂಥದ್ದೇ ವಿಭಾಗಕ್ಕೆ ಸೇರುವ ಒಂದು ಚಿತ್ರ.
ಮೂರನೆಯದಾಗಿ, ಅವರ ಮತ್ತು ನಟ ಧನಂಜಯ್ ನಡುವಿನ ಒಳ್ಳೆಯ ಸ್ನೇಹ. ಆ ಸ್ನೇಹದಿಂದಲೇ ಇತ್ತೀಚೆಗೆ 'ಹೆಡ್ ಬುಷ್' ಚಿತ್ರವನ್ನು ನೋಡಿ ರಮ್ಯಾ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಇದೆಲ್ಲದರಿಂದ 'ಉತ್ತರಕಾಂಡ' ಚಿತ್ರಕ್ಕೆ ರಮ್ಯಾ ಅವರೇ ನಾಯಕಿಯಾಗಿ ನಟಿಸುವ ಸಾಧ್ಯತೆ ಎಂಬ ಗುಸುಗುಸು ಕನ್ನಡ ಚಿತ್ರರಂಗದಲ್ಲ ಜೋರಾಗಿ ಕೇಳಿಬರುತ್ತಿದೆ.
ವಿಜಯ್ ಕಿರಗಂದೂರು ಅರ್ಪಿಸುತ್ತಿರುವ 'ಉತ್ತರಕಾಂಡ' ಚಿತ್ರವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯಡಿ ಕಾರ್ತಿಕ್ ಗೌಡ ಮತ್ತು ಯೋಗಿ.ಜಿ.ರಾಜ್ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಇನ್ನು, ರೋಹಿತ್ ಪದಕಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಧನಂಜಯ ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದು, ಸ್ವಾಮಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.