

ಟಾಲಿವುಡ್ನಲ್ಲಿ ವೆಬ್ ಸೀರೀಸ್ನ ಮೋಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಅಲ್ಲಿನ ಬಹಳ ದೊಡ್ಡ ದೊಡ್ಡ ನಟ-ನಟಿಯರೆಲ್ಲಾ ವೆಬ್ ಸೀರೀಸ್ನ ಹಿಂದೆ ಬಿದ್ದಿದ್ದಾರೆ. ಕೆಲವರು ವೆಬ್ ಸೀರೀಸ್ ನಿರ್ಮಾಣ ಮಾಡಿದರೆ, ಇನ್ನೂ ಕೆಲವರು ಅದರಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರವಿಂದ್ ಮತ್ತು ಅವರ ಮಗ ಅಜ್ಜು ಅರ್ಜುನ್, ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಆಹಾ ಎಂಬ ಓಟಿಟಿಯನ್ನೇ ಪ್ರಾರಂಭಿಸಿಬಿಟ್ಟಿದ್ದಾರೆ.
ಈಗ್ಯಾಕೆ ಈ ವಿಷಯ ಎಂದರೆ, ಈ ಸಾಲಿಗೆ ಇದೀಗ ರಾಮ್ಚರಣ್ ತೇಜ ಸಹ ಸೇರಿದ್ದಾರೆ. ರಾಮ್ಚರಣ್ ಈಗಾಗಲೇ ಒಂದು ವೆಬ್ ಸೀರೀಸ್ ನಿರ್ಮಿಸುವ ಬಗ್ಗೆ ಯೋಚಿಸುತ್ತಿದ್ದು, ಈಗಾಗಲೇ ಕೆಲಸ ಪ್ರಾರಂಭಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಸಮಂತಾ, ತಮನ್ನಾ ಮುಂತಾದವರೆಲ್ಲಾ ವೆಬ್ ಸರಣಿಗಳನ್ನು ನಿರ್ಮಿಸುವುದಕ್ಕೆ ಪ್ರಯತ್ನ ಶುರು ಮಾಡಿದ್ದಾರೆ.
ಈಗ ರಾಮ್ಚರಣ್ ತೇಜ ಸಹ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಅವರು ಇದೇ ಮೊದಲ ಬಾರಿಗೆ ವೆಬ್ ಸೀರೀಸ್ ನಿರ್ಮಿಸುತ್ತಿದ್ದಾರಾದರೂ, ನಿರ್ಮಾಣ ಅವರಿಗೆ ಹೊಸದೇನಲ್ಲ. ಈಗಾಗಲೇ ಅವರು ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಚಿತ್ರವನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, 'ಆಚಾರ್ಯ' ಎಂಬ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಹೀಗೆ ಚಿತ್ರ ನಿರ್ಮಾಣದ ಅನುಭವವಿರುವುದರಿಂದ, ಅವರಿಗೇನೂ ಇದು ಕಷ್ಟವಾಗುತ್ತದೆ ಎಂದನಿಸುವುದಿಲ್ಲ.
ಎಲ್ಲಾ ಸರಿ, ರಾಮ್ಚರಣ್ ತೇಜ ನಿರ್ಮಾಣದ ಈ ವೆಬ್ ಸರಣಿಯಲ್ಲಿ ಅವರ ತಂದೆ ಚಿರಂಜೀವಿ ಸಹ ಒಂದು ಪ್ರಮುಖ ಪಾತ್ರ ಮಾಡುತ್ತಾರಾ ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಏಕೆಂದರೆ, ಈ ಹಿಂದೆ ರಾಮ್ಚರಣ್ ನಿರ್ಮಾಣದ ಚಿತ್ರಗಳಲ್ಲಿ ಚಿರಂಜೀವಿ ಕಾಣಿಸಿಕೊಂಡಿದ್ದರು. ಹಾಗನ್ನುವುದಕ್ಕಿಂತ, ಚಿರಂಜೀವಿ ಅಭಿನಯದ ಚಿತ್ರಗಳೆಂಬ ಕಾರಣಕ್ಕಾಗಿ, ರಾಮ್ಚರಣ್ ತೇಜ ನಿರ್ಮಾಪಕರಾಗಿದ್ದರು.
ಈಗ ವೆಬ್ ಸೀರೀಸ್ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ, ಚಿರಂಜೀವಿ ಸಹ ಅದರಲ್ಲಿ ಒಂದು ಪ್ರಮುಖ ಪಾತ್ರ ಮಾಡುತ್ತಾರಾ ಅಥವಾ ಬೇರೆ ಯಾರಾದರೂ ದೊಡ್ಡ ಕಲಾವಿದರು ಅದರ ಭಾಗವಾಗುತ್ತಾರಾ ಎಂಬುದು ಎಲ್ಲರಲ್ಲೂ ಇರುವ ಒಂದು ಪ್ರಶ್ನೆ.
ಈ ಮಧ್ಯೆ, ತಮ್ಮ ಹೊಸ ಸಾಹಸದ ಬಗ್ಗೆ ರಾಮ್ಚರಣ್ ತೇಜ್ ಎಲ್ಲೂ ತುಟಿಕ್ ಪಿಟಿಕ್ ಎಂದಿಲ್ಲ. ಎಲ್ಲವನ್ನೂ ಗೌಪ್ಯವಾಗಿಟ್ಟಿರುವ ಅವರು, ಸದ್ಯದಲ್ಲೇ ಅಧಿಕೃತವಾಗಿ ಎಲ್ಲವನ್ನೂ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.