‘ಕೆಡಿ’ಗೆ ಖಡಕ್ ಜೋಡಿ ; ಧ್ರುವ ಸರ್ಜಾಗೆ ರಾಮ - ಲಕ್ಷ್ಮಣರ ಸಾಹಸ ನಿರ್ದೇಶನ

posters (1)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಪ್ರೇಮ್ ನಿರ್ದೇಶಿಸುತ್ತಿರುವ, ಧ್ರುವ ಸರ್ಜಾ ನಟಿಸುತ್ತಿರುವ, ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಕೆಡಿ: ದಿ ಡೆವಿಲ್’. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ. ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಸದ್ಯ ಚಿತ್ರತಂಡ ಸಾಹಸ ಸನ್ನಿವೇಶಗಳ ಶೂಟಿಂಗ್‌ನಲ್ಲಿ ಬಿಜಿಯಾಗಿದೆ.

ವಿಶೇಷ ಅಂದರೆ ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’, ‘ಜೇಮ್ಸ್’ ಸೇರಿ ತೆಲುಗಿನ ನೂರಕ್ಕೂ ಅಧಿಕ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ರಾಮ - ಲಕ್ಷ್ಮಣ ಜೋಡಿ ‘ಕೆಡಿ’ ಚಿತ್ರತಂಡ ಸೇರಿಕೊಂಡಿದ್ದಾರೆ. ಮೂರು ದಶಕಗಳಲ್ಲಿ ಈ ಜೋಡಿ ರಜಿನಿಕಾಂತ್, ಮೋಹನ್ ಲಾಲ್, ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ನಂದಮೂರಿ ಬಾಲಕೃಷ್ಣ, ಚಿಯಾನ್ ವಿಕ್ರಮ್, ರವಿತೇಜ, ಅಜಿತ್ ಕುಮಾರ್, ನಾನಿ, ಸಿಂಬು, ಮಹೇಶ್ ಬಾಬು, ರಾಮಚರಣ್ ತೇಜ, ವಿಜಯ್, ದಿಲೀಪ್, ವಿಶಾಲ್ ಸೇರಿ ಹಲವು ತೆಲುಗು, ತಮಿಳು ಹಾಗೂ ಮಲಯಾಳಂ ನಟರ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ.

‘ಆರ್ಯ’, ‘ಆಂಧ್ರುಡು’, ‘ಧೀ’, ‘ನೇನಿಂತೆ’, ‘ರೈಡ್’ ಹಾಗೂ ‘ಲೆಜೆಂಡ್’ ಚಿತ್ರಗಳ ಸಾಹಸ ನಿರ್ದೇಶನಕ್ಕೆ ರಾಮ - ಲಕ್ಷ್ಮಣರಿಗೆ ಅತ್ಯುತ್ತಮ ಸಾಹಸ ನಿರ್ದೇಶನ ಆಂಧ್ರ ಪ್ರದೇಶ ರಾಜ್ಯದ ನಂದಿ ಪ್ರಶಸ್ತಿ ಲಭಿಸಿವೆ. ಇಂತಹ ದಿಗ್ಗಜ ಜೋಡಿ ಇದೀಗ ಕನ್ನಡದ ‘ಕೆಡಿ’ಗೆ ಜತೆಯಾಗಿರುವುದು ಸಿನಿಮಾದ ಸಾಹಸ ಸನ್ನಿವೇಶಗಳ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದಲ್ಲಿ ಧ್ರುವ ಸರ್ಜಾಗೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದು, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net