

ಮುಂಬೈ : ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸುತ್ತಿರುವ ಹೊಸ ಚಿತ್ರ 'ರಾಮ ಸೇತು'ವಿನ ಮುಹೂರ್ತ ಸಮಾರಂಭ ಇಂದು ಉತ್ತರಪ್ರದೇಶದ ಅಯೋಧ್ಯಾ ನಗರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರತಂಡವು ಶ್ರೀರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯಿತು.
ಪೂಜೆಯ ಫೋಟೋವನ್ನು ಅಕ್ಷಯ್ ಕುಮಾರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. "ಇಂದು ಅಯೋಧ್ಯೆಯಲ್ಲಿ ರಾಮಸೇತು ಶುಭಾರಂಭದ ಸಮಯದಲ್ಲಿ ಭಗವಾನ್ ಶ್ರೀರಾಮ ದೇವರ ಆಶೀರ್ವಾದ ಲಭಿಸಿತು. ಜೈಶ್ರೀರಾಮ್" ಎಂದು ಬರೆದಿದ್ದಾರೆ.
ಇದೇ ಸಂದರ್ಭದಲ್ಲಿ ಅಯೋಧ್ಯೆಯ ರಾಮ್ ಕೀ ಪೈಡಿಯಲ್ಲಿ ಪೂಜೆ ಸಲ್ಲಿಸಲು ಅಕ್ಷಯ್ ಕುಮಾರ್ ನಡಿಗೆಯಲ್ಲೇ ಸಾಗಿದ್ದರು. ಆದರೆ ಜನಸಂದಣಿ ಹೆಚ್ಚಿದ್ದರಿಂದ ದರ್ಶನ ಪಡೆಯದೆ ಹಿಂತಿರುಗಬೇಕಾಯಿತು ಎನ್ನಲಾಗಿದೆ. ನಂತರ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಸಹ ಅಕ್ಷಯ್ ಭೇಟಿ ಮಾಡಿದರು. ಬೆಳಿಗ್ಗೆ ಮುಂಬೈನಿಂದ ಅಯೋಧ್ಯೆಗೆ ಚಿತ್ರತಂಡದೊಂದಿಗೆ ಖಾಸಗಿ ವಿಮಾನದಲ್ಲಿ ಪ್ರಯಾಣ ಆರಂಭಿಸುವ ಮುನ್ನ ತಮ್ಮ ಸಹನಟಿಯರಾದ ಜಾಕಲೀನ್ ಫರ್ನಾಂಡಿಸ್ ಮತ್ತು ನುಶ್ರತ್ ಭರೂಚಾರೊಂದಿಗಿರುವ ಮತ್ತೊಂದು ಫೋಟೋವನ್ನು ಅಕ್ಷಯ್ ಶೇರ್ ಮಾಡಿದ್ದರು.
"ಎ ಸ್ಪೆಷಲ್ ಫಿಲ್ಮ್, ಎ ಸ್ಪೆಷಲ್ ಸ್ಟಾರ್ಟ್" ಎಂದು ಶೀರ್ಷಿಕೆ ನೀಡಿ 'ರಾಮ ಸೇತು' ತಂಡದ ಪ್ರಯಾಣ ಶುರುವಾಗುತ್ತಿದೆ ಎಂದು ಅಕ್ಷಯ್ ಬರೆದಿದ್ದರು. ಮುಹೂರತ್ ಸಮಾರಂಭದಲ್ಲಿ ಜಾಕಲೀನ್ ಫರ್ನಾಂಡಿಸ್ ಮತ್ತು ನುಶ್ರತ್ ಭರೂಚಾ ಜೊತೆ ಚಿತ್ರತಂಡದ ಇತರ ಸದಸ್ಯರು ಭಾಗವಹಿಸಿದರು. ಅಭಿಷೇಕ್ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್, ಆರ್ಕಿಯಾಲಜಿಸ್ಟ್ನ ಪಾತ್ರ ವಹಿಸಲಿದ್ದಾರೆ. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ