

ನವದೆಹಲಿ: ಕರೊನಾ ಲಸಿಕೆ ಪಡೆಯಲು ವಿಧಿಸಿರುವ ವಯಸ್ಸಿನ ಮಿತಿಯನ್ನು ಸಡಿಲಗೊಳಿಸಿದಲ್ಲಿ ಮೂರು ತಿಂಗಳಲ್ಲಿ ಇಡೀ ದೆಹಲಿಯ ಜನರಿಗೆ ಲಸಿಕೆ ನೀಡಿ ಪೂರೈಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರಿಗೂ ಕರೊನಾ ಲಸಿಕೆ ಪಡೆಯಲು ಅವಕಾಶ ಕೊಡಬೇಕೆಂದು ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇಂದು ದೆಹಲಿಯಲ್ಲಿ ವರ್ಚುವಲ್ ಸುದ್ದಿಗೋಷ್ಠಿ ನಡೆಸಿದ ಕೇಜ್ರಿವಾಲ್, ಇತರ ಹಲವು ರಾಜ್ಯಗಳಲ್ಲಿ ಕರೊನಾ ಎರಡನೇ ಅಲೆ ಕಾಣಿಸಿಕೊಳ್ಳುತ್ತಿದ್ದರೂ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 500 ಸೋಂಕು ಪ್ರಕರಣಗಳು ದಾಖಲಾಗಿದ್ದು, ಅಧಿಕಾರಿಗಳು ಸೋಂಕು ಹೆಚ್ಚದಂತೆ ತೀವ್ರ ನಿಗಾ ವಹಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ, ಹೆಚ್ಚು ಜನರು ಲಸಿಕೆ ಪಡೆಯಲು ಸಾಧ್ಯವಾಗುವಂತೆ ಲಸಿಕೆ ಸಂಬಂಧೀ ನಿರ್ಬಂಧಗಳನ್ನು ಸಡಿಲೀಕರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಕೇಜ್ರಿವಾಲ್ ಒತ್ತಾಯಿಸಿದರು. "ಲಸಿಕೆಯ ಅರ್ಹತೆಯ ನಿಬಂಧನೆಯನ್ನು ಸಡಿಲೀಕರಿಸಿ, 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಮುಕ್ತಗೊಳಿಸಬೇಕೆಂದು ನಾನು ಕೇಂದ್ರವನ್ನು ಕೋರುತ್ತೇನೆ. ಇಡೀ ದೆಹಲಿಗೆ ನಾವು ಮೂರು ತಿಂಗಳಲ್ಲಿ ಲಸಿಕೆ ನೀಡಬಹುದು" ಎಂದರು.
"ಲಸಿಕೆ ಉತ್ಪಾದನೆ ಹೆಚ್ಚಿರುವುದರಿಂದ ಎಲ್ಲರಿಗೂ ಲಸಿಕೆ ನೀಡುವ ನಿರ್ಧಾರ ಕೈಗೊಳ್ಳಬೇಕು. ಯಾರು ಅರ್ಹರು ಎಂಬ ಪಟ್ಟಿ ಮಾಡುವ ಬದಲು, ಯಾರ್ಯಾರು ಅನರ್ಹರು ಎಂಬ ಪಟ್ಟಿ ಮಾಡಬೇಕು. ಉಳಿದವರಿಗೆಲ್ಲಾ ವಾಕ್ಸಿನೇಷನ್ ಒದಗಿಸಬೇಕು. ವಾಕ್-ಇನ್ ಸೌಲಭ್ಯ ಮಾಡಬೇಕು" ಎಂದು ಕೇಜ್ರಿವಾಲ್ ಹೇಳಿದರು.
ದೆಹಲಿಯಲ್ಲಿ ಪ್ರತಿದಿನ 30,000-40,000 ಲಸಿಕೆ ಡೋಸ್ಗಳನ್ನು ನೀಡಲಾಗುತ್ತಿದ್ದು, ಸದ್ಯದಲ್ಲೇ ಈ ಪ್ರಮಾಣವನ್ನು ದಿನಕ್ಕೆ 1.25 ಲಕ್ಷ ಲಸಿಕೆಗಳ ಮಟ್ಟಕ್ಕೆ ಹೆಚ್ಚಿಸಲಾಗುವುದು. ಮುಂದಿನ ಕೆಲವು ದಿನಗಳಲ್ಲಿ ಲಸಿಕೆ ನೀಡುವ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಲಸಿಕೆ ಪಡೆಯಲು ಅರ್ಹತೆ ಇರುವವರೆಲ್ಲರೂ ತಕ್ಷಣ ಲಸಿಕೆ ಪಡೆಯಬೇಕೆಂದು ದೆಹಲಿ ನಾಗರೀಕರನ್ನು ಕೋರಿದರು. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ