GGVVಗೆ ಮನಸೋತ RGV: ಕನ್ನಡ ಸಿನಿಮಾವನ್ನು ಹಾಡಿ ಹೊಗಳಿದ ರಾಮ್ ಗೋಪಾಲ್ ವರ್ಮಾ!

Published on
2021 ರಲ್ಲಿ ಬಹಳಷ್ಟು ಖ್ಯಾತಿ ಪಡೆದ ಕನ್ನಡದ ಚಿತ್ರಗಳಲ್ಲಿ ಒಂದು ಎಂದರೆ ಅದು ರಾಜ್ ಬಿ ಶೆಟ್ಟಿ ಅವರ ಎರಡನೇ ನಿರ್ದೇಶನದ 'ಗರುಡ ಗಮನ ವೃಷಭ ವಾಹನ' ಎಂದೇ ಹೇಳಬೇಕು. ಮಂಗಳೂರಿನಲ್ಲಿ ಶೂಟ್ ಮಾಡಲಾದ ಒಬ್ಬ ದರೋಡೆಕೋರನ ಬಗೆಗಿನ ಈ ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಾಕಷ್ಟು ಪ್ರಶಂಸೆಯನ್ನು ಗಳಿಸಿದೆ. ಇದೀಗ, ಈ ಸಿನಿಮಾಗೆ ಭಾರತೀಯ ಚಿತ್ರರಂಗದ ಮೇವೆರಿಕ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಫಿದಾ ಆಗಿದ್ದಾರೆ.
ರಾಜ್ ಬಿ ಶೆಟ್ಟಿಗೆ ಮತ್ತು ರಿಷಬ್ ಶೆಟ್ಟಿ ಅಭಿನಯದ 'ಗರುಡ ಗಮನ ವೃಷಭ ವಾಹನ' ಸಿನಿಮಾ ಒಟಿಟಿಯಲ್ಲಿ ಕಮಾಲ್ ಮಾಡಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಒಟಿಟಿಗೆ ಎಂಟ್ರಿ ಕೊಟ್ಟ ಈ ಚಿತ್ರ ಮೂರೇ ದಿನದಲ್ಲಿ ಬಹಳಷ್ಟು ದಾಖಲೆಗಳನ್ನು ಬರೆದಿದೆ. ಸಿನಿಮಾ ಮೂರು ದಿನಗಳಲ್ಲಿ ಬರೋಬ್ಬರಿ 8 ಕೋಟಿ ನಿಮಿಷದ ವೀಕ್ಷಣೆಗಳನ್ನು ಪಡೆದಿದೆ. ಸಿನಿಮಾಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಮನಸೂರೆಗೊಂಡಿದೆಯಂತೆ. ಈ ಬಗ್ಗೆ ಟ್ವೀಟ್ ಮಾಡಿರುವ RGV, ಚಿತ್ರವನ್ನು ಮತ್ತು ರಾಜ್ ಬಿ ಶೆಟ್ಟಿ ಅಭಿನಯವನ್ನು ಒಂದಷ್ಟು ವಿಜ್ಞಾನ ಪದಗಳಲ್ಲಿ ಬಣ್ಣಿಸಿದ್ದಾರೆ.
ಸಿನಿಮಾ ಮತ್ತೊಂದು ಲೆವೆಲ್ನಲ್ಲಿದೆ. ರಾಜ್ ಬಿ ಶೆಟ್ಟಿ ಪಾತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದು, ಇಡೀ ಚಿತ್ರ ‘ಅಲ್ಟ್ರಾಸ್ಕೋಪಿಕ್’ ಎಂದು ತಮ್ಮ ಟ್ವೀಟ್​ನಲ್ಲಿ ಹಾಡಿ ಹೊಗಳಿದ್ದಾರೆ. ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ 'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ಹೊಗಳಿದ್ದಾರೆ. ಕಳೆದ ನವೆಂಬರ್ 19ರಂದು ಥಿಯೇಟರ್ ಗೆ ಎಂಟ್ರಿ ಕೊಟ್ಟಿದ್ದ ಗಮನ ವೃಷಭ ವಾಹನ ಸಿನಿಮಾ ಥಿಯೇಟರ್ ನಲ್ಲೂ ಧೂಳ್ ಎಬ್ಬಿಸಿತ್ತು. ಈಗ ಒಟಿಟಿಯಲ್ಲಿ ಕಮಾಲ್ ಮಾಡ್ತಿದೆ. ಅದೇನೇ ಇರಲಿ, ಭಾರತೀಯ ಚಿತ್ರರಂಗದ ಮೇವೆರಿಕ್ ನಿರ್ದೇಶಕ ಕನ್ನಡ ಸಿನಿಮಾವನ್ನು, 'ಸ್ಯ್ಟ್ರಾಟೋಸ್ಪೆರಿಕ್, ಮೆಟಾಮೋಫಿಕ್, ಅಲ್ಟ್ರಾಸ್ಕೋಪಿಕ್' ಎಂದು ಹೊಗಳಿರುವುದು ಎಲ್ಲರ ಖುಷಿಗೆ ಕಾರಣವಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net