ರಕ್ಷಿತ್​ ನಿರ್ಮಾಣದಲ್ಲಿ ಇನ್ನೊಂದು ಹೊಸ ಚಿತ್ರ ...

Sakutumba Sametha - Final
Published on

ಬೆಂಗಳೂರು: ಮುಂದಿನ ದಿನಗಳಲ್ಲಿ ಹೊಸ ಪ್ರತಿಭೆಗಳ ನಿರ್ದೇಶನದಲ್ಲಿ ಹಲವು ಸಣ್ಣ ಬಜೆಟ್‌ನ ಚಿತ್ರಗಳನ್ನು ನಿರ್ಮಿಸುವುದಾಗಿ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದರು. ಅದರಂತೆ, ಅವರೀಗ ತಮ್ಮ ಪರಂವಾ ಸ್ಟುಡಿಯೋಸ್ ಮೂಲಕ ‘ಸಕುಟುಂಬ ಸಮೇತ’ ಎಂಬ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಸದ್ದಿಲ್ಲದೆ ಮುಗಿದಿದ್ದು, ಇನ್ನು ಬಿಡುಗಡೆಯಾಗಬೇಕಷ್ಟೇ.

‘ಸಕುಟುಂಬ ಸಮೇತ’ ಚಿತ್ರವನ್ನು ರಾಹುಲ್ ನಿರ್ದೇಶನ ಮಾಡಿದ್ದಾರೆ. 'ಕಿರಿಕ್​ ಪಾರ್ಟಿ', 'ರಿಕ್ಕಿ', 'ಉಳಿದವರು ಕಂಡಂತೆ' ಸೇರಿದಂತೆ ರಕ್ಷಿತ್ ಅಭಿನಯದ ಮತ್ತು ನಿರ್ಮಾಣದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ರಾಹುಲ್, ಇದೇ ಮೊದಲ ಬಾರಿಗೆ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಪೂಜಾ ಸುಧೀರ್ ಜತೆಗೆ ಸೇರಿ ಕಥೆ, ಚಿತ್ರಕಥೆಯನ್ನೂ ನಚಿಸಿದ್ದಾರೆ.

ಎಂಗೇಜ್‌ಮೆಂಟ್ ಸುತ್ತ ಸುತ್ತುವ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಭರತ್, ಸಿರಿ ರವಿಕುಮಾರ್, ಜಯಲಕ್ಷ್ಮೀ ಪಾಟೀಲ್ ಮುಂತಾದವರು ನಟಿಸಿದ್ದಾರೆ. ಮಿಥುನ್​ ಮುಕುಂದನ್​ ಸಂಗೀತ ಸಂಯೋಜಿಸಿದರೆ, ಕರಂ ಚಾವ್ಲಾ ಛಾಯಾಗ್ರಹಣ ಮಾಡಿದ್ದಾರೆ.

ಸದ್ಯ, ಚಿತ್ರವು ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಮುಗಿದಿದ್ದು, ಈ ಚಿತ್ರವನ್ನು ಓಟಿಟಿಯಲ್ಲಿ ನೇರವಾಗಿ ಬಿಡುಗಡೆ ಮಾಡಬೇಕೋ ಅಥವಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕೋ ಎಂಬ ತೀರ್ಮಾನವನ್ನು ಇನ್ನೂ ತೆಗೆದುಕೊಂಡಿಲ್ಲ ರಕ್ಷಿತ್​. ಅಂದಹಾಗೆ, ಈ ಚಿತ್ರದ ನಿರ್ಮಾಣದಲ್ಲಿ ಜಿ.ಎಸ್​. ಗುಪ್ತಾ ಎನ್ನುವವರು ಅವರ ಕೈಜೋಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net