ಶುಭಾ ತುಂಬ ಡೇಂಜರಸ್ ... ಬಿಗ್ ಮನೆಯಿಂದ ಬಂದ ಶಂಕರ್ ಅಭಿಪ್ರಾಯ

Shankar Ashwath - Final
Published on

ಬೆಂಗಳೂರು: ‘ಬಿಗ್‌ಬಾಸ್’ ಸೀಸನ್‌ನ ಎಂಟನೆಯ ಸೀಸನ್‌ನ ಐದನೇ ವಾರ, ಮನೆಯ ಹಿರಿಯ ಸದಸ್ಯ ಶಂಕರ್ ಅಶ್ವತ್ಥ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ವಯಸ್ಸಿನಲ್ಲಿ ಹಿರಿಯನಾದರೂ, ಯುವಕರ ಸರಿಸಮ ಪೈಪೋಟಿ ನಡೆಸಿ, ಹೋರಾಡಿ ಕಳಪೆ ಪಟ್ಟ ಅಲಂಕರಿಸಿ ಜೈಲೂ ಸೇರಿದ್ದರು. ಐದನೇ ವಾರಕ್ಕೆ ಅವರ ಆಟ ಮುಕ್ತಾಯವಾಗಿದೆ. ಆ ‘ಬಿಗ್’ ಮನೆಯ ನಂಟನ್ನು ಅವರೇ ಹೇಳಿಕೊಂಡಿದ್ದಾರೆ.

‘ಮನೆಯಲ್ಲಿ ಎಲ್ಲರೂ ಅವರವರೇ ಗುಂಪು ಮಾಡಿಕೊಂಡು, ಒಂದಷ್ಟು ತಂತ್ರಗಳನ್ನು ಬಳಸಿ ಆಟ ಆಡುತ್ತಿದ್ದಾರೆ. ನಾನು ಅವರೆಲ್ಲರಿಂದ ದೂರ ಇದ್ದೆ. ಯಾರೊಂದಿಗೂ ನಾನು ಅಷ್ಟಾಗಿ ಬೆರೆಯಲಿಲ್ಲ. ಅದರಲ್ಲೂ ಪ್ರಶಾಂತ್ ಸಂಬರಗಿ ತುಂಬ ಬುದ್ಧಿವಂತ. ಏನೇ ಟಾಸ್ಕ್ ನೀಡಿದರೂ ಅವರ ತಂತ್ರಗಳೇ ಮಜವಾಗಿರುತ್ತವೆ. ಅವರ ಪ್ರತಿಯೊಂದು ನಿರ್ಧಾರಗಳೂ ಚಿತ್ರವಿಚಿತ್ರವಾಗಿರುತ್ತವೆ. ಶುಭಾ ಪೂಂಜ ಮನೆಯಲ್ಲಿನವರ ಪೈಕಿ ಹೆಚ್ಚು ಅಪಾಯಕಾರಿ. ನೋಡಲು ತುಂಬ ಸ್ವೀಟ್ ಅನಿಸಿದರೂ, ಅವರ ಮೈಂಡ್‌ಗೇಮ್ ಯಾರಿಗೂ ಗೊತ್ತಾಗುವುದಿಲ್ಲ. ಎಲ್ಲರ ಮುಂದೆ ತುಂಬ ಮುಗ್ಧೆ ಎಂಬಂತೆ ತೋರಿಸಿಕೊಳ್ಳುತ್ತಾರೆ' ಎನ್ನುತ್ತಾರೆ ಶಂಕರ್​.

ಮನೆಯಲ್ಲಿನ ಸ್ಟ್ರಾಂಗ್ ಸ್ಪರ್ಧಿ ಎಂದರೆ ಅದು ಮಂಜು ಎನ್ನುವ ಅವರು, 'ಆತನಿಗೆ ರಘು ಗೌಡ ಒಬ್ಬನೇ ಪೈಪೋಟಿ ನೀಡುವುದು. ಇವರ ಜೋಡಿ ಒಂದೆಡೆಯಾದರೆ, ಮತ್ತೊಂದು ಕಡೆ ಅರವಿಂದ ಮತ್ತು ರಾಜೀವ್ ಪ್ರಬಲ ಸ್ಪರ್ಧಿಗಳು’ ಎನ್ನುತ್ತಾರವರು. ಇದನ್ನು ಹೊರತುಪಡಿಸಿದರೆ, ‘ಇನ್ನೊಂದಿಷ್ಟು ಕಾಲ ಮನೆಯಲ್ಲಿ ಇರುತ್ತೇನೆ ಎಂಬ ಭರವಸೆ ಇತ್ತು. ಆದರೆ, ತುಂಬ ಬೇಗ ಬಂದೆ ಎನಿಸುತ್ತಿದೆ’ ಎಂಬುದು ಶಂಕರ್ ಅವರ ಮಾತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net