

ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಜತೆಯಲ್ಲೇ ಪ್ರೀತಿಯಲ್ಲಿ ಬಿದ್ದು, ಚಿತ್ರ ಯಶಸ್ಸಿನ ಬೆನ್ನಲ್ಲೇ ನಿಶ್ಚಿತಾರ್ಥ ಮಾಡಿಕೊಂಡು ಕೇವಲ ಒಂದೇ ವರ್ಷದಲ್ಲಿ ಬ್ರೇಕ್ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದ ಕ್ಯೂಟ್ ಕಪಲ್ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ, ಅಂದಿನಿಂದ ಇಂದಿನವರೆಗೂ ಜತೆಯಾಗಿ ಕಾಣಿಸಿಕೊಂಡಿಲ್ಲ.
ಬ್ರೇಕ್ ಆದ ಮೇಲೆ ಇಬ್ಬರ ನಡುವಿನ ಸಂಬಂಧವೂ ಹಳಸಿದೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಚಿತ್ರ ಬಿಡುಗಡೆ, ಹುಟ್ಟುಹಬ್ಬ ಸಂಭ್ರಮದಲ್ಲಿ ಪರಸ್ಪರ ಶುಭಾಶಯಗಳನ್ನು ವಿನಿಯಮ ಮಾಡಿಕೊಳ್ಳುವ ಮೂಲಕ ನಾವು ಚೆನ್ನಾಗಿದ್ದೇವೆ ಎಂಬ ಸಂದೇಶವನ್ನು ಇಬ್ಬರು ರವಾನಿಸುತ್ತಾರೆ.
ಇಂದು ರಶ್ಮಿಕಾ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ಟ್ವೀಟ್ ಮೂಲಕ ಶುಭಕೋರಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಆಡಿಷನ್ ಸಮಯದ ಒಳ್ಳೆಯ ಕ್ಷಣಗಳ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ರಕ್ಷಿತ್, ಅಂದಿನಿಂದ ನೀವು ಇಲ್ಲಿಯವರೆಗೆ ಪ್ರಯಾಣ ಮಾಡಿದ್ದೀರಿ, ನಿಮ್ಮ ಕನಸುಗಳನ್ನು ನಿಜವಾದ ಹೋರಾಟಗಾರ್ತಿಯಂತೆ ಹಿಂಬಾಲಿಸಿದ್ದೀರಿ. ಹೆಮ್ಮೆಯ ಹುಡುಗಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದಿರುವ ರಕ್ಷಿತ್, ಮತ್ತಷ್ಟು ಯಶಸ್ಸು ನಿಮಗೆ ಸಿಗಲಿ ಎಂದು ಹಾರೈಸಿದ್ದಾರೆ.
ಇನ್ನು ರಕ್ಷಿತ್ ಮಾಡಿರುವ ಟ್ವೀಟ್ಗೆ ರಶ್ಮಿಕಾ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಇನ್ನು ರಶ್ಮಿಕಾ ಹುಟ್ಟುಹಬ್ಬಕ್ಕೆ ಸಾಕಷ್ಟು ಕಲಾವಿದರು ಶುಭಕೋರುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ, ಇತ್ತೀಚೆಗಷ್ಟೇ ನಟ ಕಾರ್ತಿಕ್ ಜತೆ ನಟಿಸಿರುವ ಸುಲ್ತಾನ್ ಚಿತ್ರ ತೆರಕಂಡಿದ್ದು, ಅದ್ಭುತ ಪ್ರದರ್ಶನ ಕಾಣುತ್ತಿದೆ.