ರಜನಿ- ಕಮಲ್ ಸಿನಿಮಾ ನಿಂತಿಲ್ಲ!; ವದಂತಿಗಳಿಗೆ ತೆರೆ ಎಳೆದ ನಿರ್ದೇಶಕ

123
Published on

ರಜನಿಕಾಂತ್ ನಾಯಕನಾಗಿ ನಟಿಸಲಿರುವ 169ನೇ ಚಿತ್ರವನ್ನು ಕಮಲ್ ಹಾಸನ್ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿ ಈ ವರ್ಷದ ಆರಂಭದಿಂದ ಓಡಾಡುತ್ತಿತ್ತು. ಆದರೆ, ಇತ್ತಿಚಿನ ಕೆಲ ದಿನಗಳಿಂದ ಆ ಸಿನಿಮಾ ನಿಂತೇ ಹೋಯಿತು ಎಂದೇ ಹೇಳಲಾಗಿತ್ತು. ರಜನಿಕಾಂತ್, ರಾಜಕೀಯದ ಕಡೆಗೆ ಹೊರಳುತ್ತಿದ್ದಂತೆ, ಕಮಲ್ ಹಾಸನ್ ನಿರ್ಮಾಣದ ಸಿನಿಮಾದಲ್ಲಿ ರಜನಿ ನಟಿಸುವುದು ಅನುಮಾನ ಎಂಬಂಥ ಸುದ್ದಿಗಳು ಹರಿದಾಡ ತೊಡಗಿದವು. ಇದೀಗ ಇದಕ್ಕೆ ಪ್ರತಿಯಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಇನ್ನೇನು ಆ ಸಿನಿಮಾ ಶೀಘ್ರದಲ್ಲಿ ಘೋಷಣೆಯಾಗಲಿದೆಯಂತೆ.

ನಿರ್ದೇಶಕ ಲೋಕೇಶ್ ಕನಗರಾಜ್, ರಜನಿಕಾಂತ್ ಜತೆಗಿನ ಹೊಸ ಸಿನಿಮಾ ನಿಂತಿಲ್ಲ ಎಂದಿದ್ದಾರೆ. ಎಲ್ಲವೂ ಸರಿಯಾಗಿದ್ದಿದ್ದರೆ, ಏಪ್ರಿಲ್‌ನಲ್ಲೇ ಈ ಸಿನಿಮಾ ಘೊಷಣೆಯಾಗಬೇಕಿತ್ತಂತೆ. ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಘೋಷಣೆಯನ್ನು ಮುಂದೂಡಲಾಗಿದೆ. ‘ಚಿತ್ರೀಕರಣ ಪೂರ್ವ ಕೆಲಸಗಳು ಶುರುವಾಗಿದ್ದು, ರಜನಿ ಅವರು ಡೇಟ್ಸ್ ಕೊಡುವುದರ ಮೇಲೆ ಸಿನಿಮಾ ಘೋಷಣೆ ಅವಲಂಬಿತವಾಗಿದೆ. ಹಾಗಾಗಿ ನವೆಂಬರ್ ವೇಳೆಗೆ ಸಿನಿಮಾ ಅಧಿಕೃತವಾಗಿ ಸೆಟ್ಟೇರಲಿದೆ’ ಎಂದು ಕಮಲ್ ಹಾಸನ್ ಪ್ರೊಡಕ್ಷನ್ ಸಂಸ್ಥೆಯ ಮೂಲಗಳು ಈ ರೀತಿಯ ಮಾಹಿತಿಯನ್ನು ಹೊರಹಾಕಿವೆ. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಸಿದ್ಧವಾಗಬೇಕಿದ್ದ ಈ ಚಿತ್ರಕ್ಕೆ ರಾಜ್ ಕಮಲ್ ಫಿಲಂಸ್ ಇಂಟರ್‌ನ್ಯಾಷನಲ್ ಬಂಡವಾಳ ಹೂಡಲಿದೆ.

ಇನ್ನು ಈ ಸಿನಿಮಾದಲ್ಲಿ ರಜನಿ ಜತೆಗೆ ಕಮಲ್ ನಟಿಸುತ್ತಾರಾ ಇಲ್ಲವಾ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net