ಆನ್​ಲೈನ್​ನಲ್ಲೇ ಗೀತಾಧ್ಯಯನ ಮಾಡುತ್ತಿದ್ದಾರೆ ಮೌನಿ ರಾಯ್​!

bhagwat-geeta-mouni-roy-stay-home
Published on

ಬಾಲಿವುಡ್​ ಬೆಡಗಿ ಮೌನಿ ರಾಯ್​ ಸದ್ಯ ದುಬೈನಲ್ಲಿದ್ದಾರೆ. ತಂಗಿ ಜತೆ ಕ್ವಾರಂಟೈನ್​ಲ್ಲಿದ್ದಾರೆ. ಆಗಾಗ ಸೋಷಿಯಲ್​ ಮೀಡಿಯಾಕ್ಕೆ ಬಂದು ಗ್ಲಾಮರಸ್​ ಫೋಟೋಗಳನ್ನು ಶೇರ್​ ಮಾಡಿ, ಪಡ್ಡೆಗಳ ಹೃದಯಕ್ಕೆ ಲಗ್ಗೆ ಇಟ್ಟು ಹೋಗುತ್ತಾರೆ. ಇದೆಲ್ಲದರ ನಡುವೆ ಭಾರತ ಅವರನ್ನು ತುಂಬ ಕಾಡುತ್ತಿದೆಯಂತೆ. ತಾಯ್ನಾಡಿಗೆ ಯಾವಾಗ ಬಂದೇನೋ ಎಂದು ಅವರ ಮನಸ್ಸು ತುಡಿಯುತ್ತಿದೆಯಂತೆ.

‘ಸದ್ಯಕ್ಕೆ ನಾನು ಅಬುದಾಬಿಯಲ್ಲಿ ಆರಾಮವಾಗಿದ್ದೇನೆ. ನನ್ನ ಬಾಲ್ಯದ ಸ್ನೇಹಿತೆಯ ಮನೆಯಲ್ಲಿ ಕಾಲ ಕಳೆಯುತ್ತಿದ್ದೇನೆ. ಆದರೂ ನನಗೆ ಅಮ್ಮ ನೆನಪಾಗುತ್ತಿದ್ದಾರೆ. ಮನೆ ಮತ್ತು ನನ್ನ ಭಾರತ ನೆನಪಾಗುತ್ತಿದೆ. ಭಾರತಕ್ಕೆ ಬರಲು ತುದಿಗಾಲಮೇಲೆ ನಿಂತಿದ್ದೇನೆ. ಅಬುದಾಬಿಯಲ್ಲಿ ನಾನಿದ್ದರೂ, ನನ್ನ ಮನಸ್ಸೆಲ್ಲ ನನ್ನೂರಲ್ಲೇ ಇದೆ. ಆದರೂ ಇಂಥ ಪರಿಸ್ಥಿತಿಯಲ್ಲಿ ಊರಿಗೆ ಮರಳಬೇಕೋ ಬೇಡವೋ ಎಂಬ ಗೊಂದಲವೂ ಇದೆ’ ಎನ್ನುತ್ತಾರೆ ಮೌನಿ.

ಮೂಲ ಬೆಂಗಾಲಿಯಾಗಿರುವ ಮೌನಿ, ಸದ್ಯ ವಿಡಿಯೋ ಕಾಲ್​ ಮೂಲಕ ಅಮ್ಮನ ಜತೆ ಸೇರಿ ಬೆಂಗಾಲಿಯ ಬಗೆಬಗೆಯ ಖಾದ್ಯ ಮಾಡುವುದನ್ನು ಕಲಿಯುತ್ತಿದ್ದಾರೆ. ಅಲ್ಲಿನ ಸಾಂಪ್ರದಾಯಿಕ ಅಡುಗೆಯನ್ನೂ ಮನೆಯಲ್ಲಿ ತಯಾರಿಸುತ್ತಿದ್ದಾರೆ. ಈ ಮೊದಲು ಅಡುಗೆ ಮನೆಗೆ ಕಾಲಿಡುವುದಕ್ಕೆ ಹಿಂದೇಟು ಹಾಕುತ್ತಿದ್ದೆ. ಇದೀಗ ನಾನು ಒಳ್ಳೆಯ ಬಾಣಸಿಗಳಾಗಿದ್ದೇನೆ ಎಂದೂ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲ ಚಿಕ್ಕಂದಿನಲ್ಲಿ ಹಲವು ಬಾರಿ ಭಗವದ್ಗೀತೆ ಓದಿದ್ದರೂ ಅದರ ಅರ್ಥ ಅಷ್ಟಾಗಿ ಮೌನಿಗೆ ಗೊತ್ತಿರಲಿಲ್ಲವಂತೆ. ಆ ಒಂದು ಕಾರಣಕ್ಕೆ ಆನ್​ಲೈನ್​ನಲ್ಲಿ ಭಗವದ್ಗೀತೆ ತರಗತಿಯಲ್ಲಿಯೂ ಅವರು ಭಾಗವಹಿಸಿದ್ದಾರೆ. ಇನ್ನು ಕಳೆದ ಕೆಲ ತಿಂಗಳಿಂದ ದುಬೈನ ಅಬುದಾಬಿಯಲ್ಲಿರುವ ಮೌನಿ, ಮುಂದಿನ ಒಂದು ತಿಂಗಳು ಅಲ್ಲಿಯೇ ಕಾಲ ಕಳೆಯುವುದಾಗಿ ಕೇಳಿದ್ದಾರೆ. ಬಾಲಿವುಡ್​ನಲ್ಲಿ ಸಿನಿಮಾ ಕೆಲಸಗಳು ಯಥಾಪ್ರಕಾರ ಶುರುವಾದ ಬಳಿಕವಷ್ಟೇ ಮುಂಬೈಗೆ ಅವರು ಮರಳಲಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net