

ಚೆನ್ನೈ: ಕರೊನಾ ಮತ್ತು ಲಾಕ್ಡೌನ್ನಿಂದ ಅತಂತ್ರವಾಗಿದ್ದ ಬಿಗ್ಬಜೆಟ್ ಮತ್ತು ಸ್ಟಾರ್ ಚಿತ್ರಗಳ ಪೈಕಿ ರಜನಿಕಾಂತ್ ಅಭಿನಯದ ಅಣ್ಣಾತ್ತೆ ಸಹ ಒಂದು. ಕೊನೆಗೂ ಈ ಚಿತ್ರದ ಚಿತ್ರೀಕರಣ ಬುಧವಾರ ಹೈದರಾಬಾದ್ನಲ್ಲಿ ಮುಗಿದಿದ್ದು, ರಜನಿಕಾಂತ್ ಚೆನ್ನೈಗೆ ವಾಪಸ್ಸಾಗಿದ್ದಾರೆ.
ಅಣ್ಣಾತ್ತೆ ಚಿತ್ರದ ಚಿತ್ರೀಕರಣ 2020ರಲ್ಲಿ ಆರಂಭವಾಗಿತ್ತು. ಒಂದಿಷ್ಟು ಭಾಗದ ಚಿತ್ರೀಕರಣದ ನಂತರ ಲಾಕ್ಡೌನ್ನಿಂದ ಚಿತ್ರೀಕರಣ ನಿಂತಿತ್ತು. ಚಿತ್ರತಂಡದವರು ಆದಷ್ಟು ಬೇಗ ಚಿತ್ರೀಕರಣ ಮುಗಿಸಿ, ಈ ವರ್ಷದ ಸಂಕ್ರಾಂತಿಗೆ ಬಿಡುಗಡೆ ಮಾಡಬೇಕು ಎಂದು ಪ್ಲಾನ್ ಹಾಕಿಕೊಂಡಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ.
ಕರೊನಾ ಮೊದಲ ಅಲೆಯ ಅಬ್ಬರ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ ಡಿಸೆಂಬರ್ನಲ್ಲಿ ಚಿತ್ರತಂಡದವರು ಪುನಃ ಚಿತ್ರೀಕರಣ ಪ್ರಾರಂಭಿಸಿದರಾದರೂ, ಚಿತ್ರತಂಡದ ಏಳು ಜನರಿಗೆ ಕರೊನಾ ಪಾಸಿಟಿವ್ ಉಂಟಾದ ಹಿನ್ನೆಲಯಲ್ಲಿ ಚಿತ್ರೀಕರಣ ಮತ್ತೊಮ್ಮೆ ನಿಲ್ಲಿಸಲಾಗಿತ್ತು.
ಕೊನೆಗೆ, ಏಪ್ರಿಲ್ನಲ್ಲಿ ಹೈದರಾಬಾದ್ನಲ್ಲಿ ಮತ್ತೊಮ್ಮೆ ಚಿತ್ರೀಕರಣ ಪ್ರಾರಂಭಿಸಲಾಯಿತು. ಈ ಭಾಗದ ಚಿತ್ರೀಕರಣದಲ್ಲಿ ಸಾಕಷ್ಟು ಕಲಾವಿದರು ಭಾಗವಹಿಸಿದ್ದು, ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣ ಮಾಡಲಾಗಿದೆಯಂತೆ. 35 ದಿನಗಳ ಈ ಹಂತದ ಚಿತ್ರೀಕರಣ ಕೊನೆಗೂ ಬುಧವಾರ ಮುಗಿದಿದ್ದು, ಈ ಮೂಲಕ ಚಿತ್ರ ಸಂಪೂರ್ಣವಾಗಿದೆ. ಸದ್ಯದಲ್ಲೇ ಪೋಸ್ಟ್ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಲಿದ್ದು, ಈ ವರ್ಷದ ದೀಪಾವಳಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಅಣ್ಣಾತ್ತೆ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದ್ದು, ಶಿವ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಜನಿಕಾಂತ್, ನಯನತಾರಾ, ಕೀರ್ತಿ ಸುರೇಶ್, ಮೀನಾ, ಖುಷ್ಬೂ ಮುಂತಾದವರು ನಟಿಸಿದ್ದಾರೆ.