

ಹೈದರಾಬಾದ್: ಪ್ಯಾನ್ ಇಂಡಿಯಾ ಚಿತ್ರಗಳ ಪರಂಪರೆ ನಮ್ಮಲ್ಲಿ ಹೊಸದಲ್ಲದಿದ್ದರೂ, ಅದನ್ನು ದೊಡ್ಡ ಮಟ್ಟದಲ್ಲಿ ಪರಿಚಯಿಸಿದವರು ನಿರ್ದೇಶಕ ಎಸ್.ಎಸ್. ರಾಜಮೌಳಿ, ತಮ್ಮ 'ಬಾಹುಬಲಿ' ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಟ್ರೆಂಡ್ ಹುಟ್ಟುಹಾಕಿದರು.
ಈಗಾಗಲೇ 'ಬಾಹುಬಲಿ' ಮತ್ತು 'RRR' ಎಂಬ ಪ್ಯಾನ್ ಇಂಡಿಯಾ ಚಿತ್ರಗಳನ್ನು ಮಾಡಿರುವ ರಾಜಮೌಳಿ, ಈ ಬಾರಿ ಪ್ಯಾನ್ ವರ್ಲ್ಡ್ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದು, ತಮ್ಮ ಹೊಸ ಚಿತ್ರವನ್ನು ಬರೀ ಭಾರತೀಯ ಭಾಷೆಗಳಷ್ಟೇ ಅಲ್ಲ, ಅಂತಾರಾಷ್ಟ್ರೀಯ ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡುವುದಕ್ಕೆ ಹೆಜ್ಜೆ ಇಟ್ಟಿದ್ದಾರಂತೆ. ಈ ಚಿತ್ರವು ಭಾರತದ ಮೊಟ್ಟ ಮೊದಲ ಪ್ಯಾನ್ ವರ್ಲ್ಡ್ ಚಿತ್ರ ಎಂದು ಹೇಳಲಾಗುತ್ತಿದೆ.
ಹೌದು, ಮಹೇಶ್ ಬಾಬು ಅಭಿನಯದಲ್ಲಿ ರಾಜಮೌಳಿ ಒಂದು ಸಾಹಸಮಯ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಹಲವು ದೇಶಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಈ ಚಿತ್ರದಲ್ಲಿ, ಹಾಲಿವುಡ್ನ ನಟರು ಸಹ ನಟಿಸುವ ಸಾಧ್ಯತೆ ಇದೆ. ಈ ಚಿತ್ರವನ್ನು ಪ್ಯಾನ್ ಇಂಡಿಯಾ ಬಟ್ಟು, ಪ್ಯಾನ್ ವರ್ಲ್ಡ್ ಚಿತ್ರವನ್ನಾಗಿ ಮಾಡುವ ಬಯಕೆ ರಾಜಮೌಳಿ ಅವರದ್ದು.
ಅದಕ್ಕೆ ಕಾರಣವೂ ಇದೆ. ರಾಜಮೌಳಿ ಅವರ ಇತ್ತೀಚಿನ ಚಿತ್ರಗಳಿಗೆ ಬೇರೆ ದೇಶಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅವರಿಗೆ ದೇಶ-ವಿದೇಶಗಳಲ್ಲಿ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. 'ಬಾಹುಬಲಿ' ಚಿತ್ರವು ರಷ್ಯನ್ ಭಾಷೆಗೆ ಡಬ್ ಆಗಿದ್ದು, 'RRR' ಚಿತ್ರವು ಜಪಾನ್ನಲ್ಲಿ ಬಿಡಗುಡೆಯಾಗಿದ್ದು, ರಾಜಮೌಳಿಗೆ ಉತ್ಸಾಹ ತುಂಬಿದೆ. ಅದೇ ಕಾರಣಕ್ಕೆ ಅವರು ತಮ್ಮ ಮುಂದಿನ ಚಿತ್ರವನ್ನು ಪ್ಯಾನ್ ವರ್ಲ್ಡ್ ಚಿತ್ರವನ್ನಾಗಿ ಮಾಡುವುದಕ್ಕೆ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.