

ಬೆಂಗಳೂರು: ಶ್ರೇಯಸ್ ಮಂಜು ನಟನೆಯ ‘ರಾಣ’ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಸುದ್ದಿ ಕಳೆದ ಎರಡು ತಿಂಗಳ ಹಿಂದಷ್ಟೇ ಹೊರಬಿದ್ದಿತ್ತು. ಹಾಡಿನ ತಯಾರಿಯಲ್ಲಿಯೂ ರಾಗಿಣಿ ತೊಡಗಿಸಿಕೊಂಡಿದ್ದರು. ಇದೀಗ ಅದರಲ್ಲೊಂದು ಮಹತ್ವದ ಬದಲಾವಣೆಯಾಗಿದೆ. ರಾಗಿಣಿ ಜಾಗಕ್ಕೆ ಸದ್ದಿಲ್ಲದೆ ಸಂಯುಕ್ತಾ ಹೆಗ್ಡೆ ಎಂಟ್ರಿಯಾಗಿದ್ದಾರೆ. ಈ ಮೂಲಕ ತುಪ್ಪದ ಬೆಡಗಿ ಹೊರಬಂದರೆ, ಕಿರಿಕ್ ಹುಡುಗಿ ಹೊಸದಾಗಿ ತಂಡ ಸೇರಿಕೊಂಡಿದ್ದಾರೆ.
ಹಾಗಾದರೆ, ರಾಗಿಣಿ ಮತ್ತು ತಂಡದ ನಡುವೆ ಏನಾದರೂ ಮನಸ್ಥಾಪವಾಯ್ತೆ? ಹಾಗೇನು ಇಲ್ಲ ಎನ್ನುತ್ತಾರೆ ನಿರ್ದೇಶಕ ನಂದಕಿಶೋರ್. ‘ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ರಾಗಿಣಿ ಮತ್ತು ಶ್ರೇಯಸ್ ಕಾಂಬಿನೇಷನ್ನ ಹಾಡಿನ ಶೂಟಿಂಗ್ ಮುಗಿದಿರಬೇಕಿತ್ತು. ಹಾಡಿಗಾಗಿಯೇ ಕಂಠೀರವ ಸ್ಟುಡಿಯೋದ ಅಂಗಳದಲ್ಲಿ ಸೆಟ್ ಹಾಕಲಾಗಿತ್ತು. ಮಳೆಯಿಂದಾಗಿ ಚಿತ್ರೀಕರಣ ಸಾಧ್ಯವಾಗಲಿಲ್ಲ. ಇತ್ತ ರಾಗಿಣಿಗೆ ಬೇರೆ ಪ್ರಾಜೆಕ್ಟ್ ಇರುವುದರಿಂದ, ಅವರ ಬದಲಿಗೆ ಸಂಯುಕ್ತಾ ಅವರನ್ನು ಆಯ್ಕೆ ಮಾಡಿದ್ದೇವೆ’ ಎನ್ನುತ್ತಾರೆ ನಂದಕಿಶೋರ್.
ಮುಂದಿನ ವಾರ ಮೂರು ದಿನಗಳ ಕಾಲ, 200ಕ್ಕೂ ಅಧಿಕ ಡಾನ್ಸರ್ಗಳ ಜತೆಯಲ್ಲಿ ಈ ಹಾಡಿನ ಶೂಟಿಂಗ್ ನಡೆಯಲಿದೆ. ಈ ಹಾಡಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದು, ಚಂದನ್ ಶೆಟ್ಟಿ ಸಂಗೀತ ಇರಲಿದೆ. ಈ ಹಾಡಿನ ಬಳಿಕ ಹೊಸಪೇಟೆಯಲ್ಲಿ ಸರಿಸುಮಾರು ಎರಡು ಸಾವಿರ ಡಾನ್ಸರ್ಗಳನ್ನಿಟ್ಟುಕೊಂಡು ಮತ್ತೊಂದು ವಿಶೇಷ ಹಾಡನ್ನೂ ಈ ತಂಡ ಸೆರೆಹಿಡಿಯಲಿದೆ. ಶ್ರೇಯಸ್ಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಗುಜ್ಜಲ್ ಪುರುಷೋತ್ತಮ್ ಈ ಚಿತ್ರ ನಿರ್ವಿುಸುತ್ತಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣವಿದೆ.