ಪ್ರೀತಿಯಿಂದ ಬಂದ್ರೆ ರಾಘವ; ಇಲ್ಲಾಂದ್ರೆ ಕಾಲಭೈರವ … 'ರಾಘವೇಂದ್ರ' ಟೀಸರ್ ಬಿಡುಗಡೆ

Raghavendra
Published on

ಬೆಂಗಳೂರು: ಅವರಿಬ್ಬರಿಗೂ ಇದು ಎರಡನೇ ಚಿತ್ರ. ಇದಕ್ಕೂ ಮೊದಲು 'ಹುಲಿದುರ್ಗ' ಎಂಬ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಈ ಚಿತ್ರಕ್ಕೆ ಸುಪ್ರೀತ್​ ನಾಯಕನಾದರೆ, ವಿಕ್ರಮ್​ ಯಶೋಧರ ನಿರ್ದೇಶನ ಮಾಡಿದ್ದರು. ಈಗ ಇಬ್ಬರೂ 'ರಾಘವೇಂದ್ರ' ಎಂಬ ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ.

'ರಾಘವೇಂದ್ರ' ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಧೀರನ್ ರಾಮ್​ಕುಮಾರ್ ಟೀಸರ್​ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 'ರಾಘವೇಂದ್ರ' ಒಂದು ಪಕ್ಕಾ ಕಮರ್ಷಿಯಲ್​ ಚಿತ್ರವಾಗಿದ್ದು, 'ದಿ ವಾರಿಯರ್​' ಎಂಬ ಟ್ಯಾಗ್​ಲೈನ್​ ಸಹ ಇದೆ.

ಇದು ಒಬ್ಬ ಬಾರ್​ ಸಪ್ಲೈಯರ್​ ಮತ್ತು ಅನಕ್ಷರಸ್ಥ ಹುಡುಗಿಯ ನಡುವೆ ನಡೆಯುವ ಕಥೆಯಂತೆ. ಅವರಿಬ್ಬರೂ ಸೇರಿಕೊಂಡು ತಮಗೆ ಬಾರ್​ ಬೇಡ, ವಿದ್ಯಾಲಯ ಬೇಕು ಎಂದು ಹೋರಾಟ ಮಾಡುತ್ತಾರಂತೆ. ಊರಿಗೆ ಏನೇನು ಬೇಕೋ ಅದನ್ನು ದೊಡ್ಡವರೇ ಸೇರಿಕೊಂಡು ಡಿಸೈಡ್ ಮಾಡಿಕೊಂಡರೆ, ಯಾವ ರಾಜಕೀಯ ವ್ಯಕ್ತಿಗಳೂ ಬೇಕಾಗಿಲ್ಲ ಎಂಬ ಸಂದೇಶ ಇರುವ ಈ ಚಿತ್ರಕ್ಕೆ ಮಂಡ್ಯ, ಮೈಸೂರು, ಬೆಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ಫೆಬ್ರವರಿ ಮೊದಲ ವಾರ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆಯಂತೆ.

ಈ ಚಿತ್ರದಲ್ಲಿ ಶೇ.80ರಷ್ಟು ಕಮರ್ಷಿಯಲ್​ ಅಂಶಗಳಿದ್ದು ಉಳಿದ ಶೇ. 20ರಷ್ಟು ಸಂದೇಶವಿದೆ ಎಂದು ನಾಯಕ ಸುಪ್ರೀತ್​ ಹೇಳಿಕೊಂಡರೆ, ಈ ಚಿತ್ರದಲ್ಲಿ ತಾನು ವಾಣಿ ಎಂಬ ತಾಯಿ ಇಲ್ಲದ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕಿ ಪ್ರತೀಕ್ಷಾ ಹೇಳಿದರು.

'ರಾಘವೇಂದ್ರ' ಚಿತ್ರವನ್ನು ಪರಿಣೀತಾ ಪ್ರೊಡಕ್ಷನ್ಸ್​ನಡಿ ಸಿದ್ಧರಾಜು ಎಂಬುವವರು ನಿರ್ಮಿಸಿದ್ದಾರೆ. ಅಲೆಕ್ಸ್​ ಸಂಗೀತ, ಉಮೇಶ್​ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ನಾಗೇಂದ್ರ ಪ್ರಸಾದ್​, ಸಹನಾ ಮೂರ್ತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net