

2009ರ ವಾಂಟೆಡ್ ಸಿನಿಮಾದಿಂದ 2019ರ ವರೆಗೂ (2013 ಹೊರತುಪಡಿಸಿ) ಸಲ್ಮಾನ್ ಖಾನ್ ರಮ್ಜಾನ್ ಈದ್ ಹಬ್ಬಕ್ಕೆ ಕಡ್ಡಾಯವಾಗಿ ತೆರೆಮೇಲೆ ಕಾಣಿಸುತ್ತಾರೆ. ಆದರೆ, ಈ ವರ್ಷದ ಈದ್ಗೆ ಅವರು ಆಗಮಿಸುವುದಿಲ್ಲ. ಹೌದು, ಎಲ್ಲ ಅಂದುಕೊಂಡಂತೆ ಆಗಿದ್ದರೆ, ರಾಧೆ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಸಿನಿಮಾ. ಈದ್ (ಮೇ 22) ಪ್ರಯುಕ್ತ ಬಿಡುಗಡೆ ಆಗಲಿದೆ ಎಂದೇ ಹೇಳಲಾಗಿತ್ತು ಆದರೆ, ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಆಗುವುದು ಅನುಮಾನ ಸೃಷ್ಟಿಸಿದೆ.
2009ರಿಂದ ಇಲ್ಲಿಯವರೆಗೂ ಈದ್ ಪ್ರಯುಕ್ತ ಒಂದಲ್ಲ ಒಂದು ಸಿನಿಮಾ ಮೂಲಕ ರಂಜಿಸುತ್ತ ಬಂದಿರುವ ಸಲ್ಮಾನ್ಗೆ ಈ ಬಾರಿಯ ಕರೊನಾ ಪೆಟ್ಟು ಕೊಟ್ಟಿದೆ. ಶೂಟಿಂಗ್ ಸೇರಿ ಹಲವು ಕೆಲಸಗಳು ಬಾಕಿ ಇರುವುದರಿಂದ ಹೇಳಿಕೊಂಡ ಸಮಯಕ್ಕೆ ಸಿನಿಮಾ ತೆರೆಕಾಣುವುದು ಕಷ್ಟಸಾಧ್ಯ. ಹಾಗಾಗಿ ಸಿನಿಮಾ ಮುಂದೂಡಿಕೆ ಆಗುವುದು ನಿಶ್ಚಿತ ಎನ್ನುತ್ತಿವೆ ಬಾಲಿವುಡ್ ಮೂಲಗಳು.
ಅದೇ ರೀತಿ ಅಕ್ಷಯ್ ಕುಮಾರ್ ನಟನೆಯ ಲಕ್ಷ್ಮೀ ಬಾಂಬ್ ಸಿನಿಮಾ ಸಹ ಈದ್ಗೆ ಬಿಡುಗಡೆ ಆಗಲಿದೆ ಎಂಬುದನ್ನು ಸ್ವತಃ ಚಿತ್ರತಂಡ ಅಧಿಕೃತ ಪಡಿಸಿತ್ತು. ಆದರೆ, ಅದೆಲ್ಲದಕ್ಕೂ ಈಗ ಕರೊನಾ ಕೊಕ್ಕೆ ಹಾಕಿದ್ದು, ಲಾಕ್ಡೌನ್ ಸಹ ವಿಸ್ತರಣೆಯಾಗಿದೆ.
ಇನ್ನು ಸೂರ್ಯವಂಶಿ, 83, ಕೂಲಿ ನಂ.1, ಗುಲಾಬ್ ಸಿತಾಬೋ, ಸೇರಿ ಹಲವು ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಕರೊನಾದಿಂದಾಗಿ ಅವುಗಳ ಬಿಡುಗಡೆಯೂ ಮುಂದೋಗಿದೆ. (ಏಜೆನ್ಸೀಸ್)