ಸೋಷಿಯಲ್​ ಮೀಡಿಯಾ ಎಂದರೆ ಆಗದ ರಚಿತಾ ಇಲ್ಲಿ ತತ್ವಿರುದ್ಧ

ರಅಚಹಿತಅ
Published on

ಕಳೆದ ವರ್ಷ 7 ಸಿನಿಮಾಗಳಲ್ಲಿ ನಟಿಸಿದ್ದ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಈ ವರ್ಷವೂ ಅಷ್ಟೇ ಬಿಜಿ ನಟಿ. ಈ ವರ್ಷದಲ್ಲಿ ‘100’ ಬಹುಶಃ ಅವರ ಮೊದಲ ಸಿನಿಮಾ ಆಗಿ ಶೀಘ್ರದಲ್ಲೇ ತೆರೆ ಕಾಣಲಿದೆ. ‘ಸೂರಜ್ ಪ್ರೊಡಕ್ಷನ್’ನ ಎಂ.ರಮೇಶ್ ರೆಡ್ಡಿ ನಿರ್ವಿುಸಿ, ರಮೇಶ್ ಅರವಿಂದ್ ನಿರ್ದೇಶಕ ಮತ್ತು ನಾಯಕರಾಗಿರುವ ಈ ಸಿನಿಮಾದಲ್ಲಿ ರಚಿತಾ ನಾಯಕಿ. ಅವರು ‘100’ ಮೂಲಕವೇ 2020ರ ಖಾತೆ ತೆರೆವ ಸಾಧ್ಯತೆ ಇದ್ದು ತಮ್ಮ ಪಾತ್ರ-ಚಿತ್ರದ ಬಗ್ಗೆ ಸಿನಿವಾಣಿ ಜತೆ ಹಂಚಿಕೊಂಡಿರುವ ಅನಿಸಿಕೆಗಳಿವು.

‘ನಾನು ಇನ್​ಸ್ಟಾಗ್ರಾಮ್​ನಲ್ಲಷ್ಟೇ ಇದ್ದೇನೆ. ಅದೂ ಇಷ್ಟದಿಂದ ಅಲ್ಲ, ಒಂಥರ ಒತ್ತಾಯಪೂರ್ವಕ. ಉಳಿದಂತೆ ನಾನು ಟ್ವಿಟರ್-ಫೇಸ್​ಬುಕ್ ಯಾವುದರಲ್ಲೂ ಇಲ್ಲ, ಸೆಲ್ಪಿ ಇಲ್ವೇ ಇಲ್ಲ. ನನ್ನ ಹೆಸರಿನಲ್ಲಿ ಯಾರೋ ಟ್ವಿಟರ್ ಅಕೌಂಟ್ ತೆರೆದು ಅಫಿಷಿಯಲ್ ಅಕೌಂಟ್ ಅನ್ನೋ ಥರ ಮ್ಯಾನೇಜ್ ಮಾಡುತ್ತಿದ್ದಾರೆ. ಆದರೆ, ಅದು ನಾನಲ್ವೇ ಅಲ್ಲ ...’ ಎಂಬುದನ್ನು ಸ್ಪಷ್ಟವಾಗಿ ಹೇಳಿದರು ರಚಿತಾ.

ಹೀಗೆ ಅವರು ಸೋಷಿಯಲ್ ಮೀಡಿಯಾ ಬಗ್ಗೆ ಇಷ್ಟೆಲ್ಲ ಮಾತನಾಡುವುದಕ್ಕೂ ಕಾರಣವಿದೆ. ಏಕೆಂದರೆ, ‘100’ ಸಿನಿಮಾದ ವಿಷಯವೇ ಅದು.

‘ಈ ಚಿತ್ರದಲ್ಲಿ ನನಗೆ ಸೆಲ್ಪಿ ಹುಚ್ಚು. ಏನು ಮಾಡಿದರೂ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿರುತ್ತೇನೆ. ಆದರೆ, ನಿಜಜೀವನದಲ್ಲಿ ನಾನು ಇದಕ್ಕೆ ತದ್ವಿರುದ್ಧ ...’ ಎನ್ನುತ್ತಲೇ ತಮ್ಮ ಹೊಸ ಸಿನಿಮಾ ‘100’ ಹಾಗೂ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು ‘ಡಿಂಪಲ್ ಕ್ವೀನ್’ ರಚಿತಾ ರಾಮ್.

‘ನಾನಿಲ್ಲಿ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ನನ್ನದು ರಮೇಶ್ ಅವರ ತಂಗಿಯ ಪಾತ್ರ. ಮೂರೂ ಹೊತ್ತು ಫೋನು ಫೋನು ಎನ್ನುತ್ತಿರುತ್ತೇನೆ. ಮನೆಯಲ್ಲಿ ಏನೇ ಮಾಡಿದರೂ, ಸೋಷಿಯಲ್ ಮೀಡಿಯಾಗೆ ಆ ಫೋಟೋ ಹಾಕುತ್ತಿರುತ್ತೇನೆ. ಅದು ಹೇಗೆ ಮಿಸ್ ಯೂಸ್ ಆಗುತ್ತದೆ ಎಂಬುದು ಈ ಚಿತ್ರದಲ್ಲಿದೆ. ಇದೊಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಕಥೆ. ಸೋಷಿಯಲ್ ಮೀಡಿಯಾ ಬಳಕೆಯಿಂದ ಆ ಕುಟುಂಬ ಏನೆಲ್ಲ ಸಮಸ್ಯೆಗಳಿಗೆ ಒಳಗಾಗುತ್ತದೆ ಎನ್ನುವುದನ್ನು ತೋರಿಸುವ ಮೂಲಕ ಸೋಷಿಯಲ್ ಮೀಡಿಯಾವನ್ನು ಕೆಲವರು ಹೇಗೆಲ್ಲ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನೂ ಹೇಳಿದ್ದೇವೆ. ಕೊನೆಯಲ್ಲಿ ಒಂದು ಸಂದೇಶವೂ ಇದೆ’ ಎನ್ನುತ್ತಾರೆ ರಚಿತಾ.

ನಿರ್ದೇಶನ ಕಷ್ಟ ಕಷ್ಟ!: ಈ ಹಿಂದೆ ರಮೇಶ್ ಅವರ ಜತೆ ‘ಪುಷ್ಪಕ ವಿಮಾನ’ದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದ ರಚಿತಾಗೆ, ಇಲ್ಲಿ ಮತ್ತೊಮ್ಮೆ ರಮೇಶ್ ಜತೆ, ಅದೂ ಅವರ ನಿರ್ದೇಶನದಲ್ಲೇ ಅಭಿನಯಿಸುವ ಅವಕಾಶ ಸಿಕ್ಕಿದೆ. ‘‘ಪುಷ್ಪಕ ವಿಮಾನದಲ್ಲಿ ಒಂದು ಚಿಕ್ಕ ಪಾತ್ರವಿತ್ತು. ಅಷ್ಟು ದೊಡ್ಡ ಕಲಾವಿದರ ಜತೆ ಜಾಸ್ತಿ ಸ್ಕ್ರೀನ್​ಸ್ಪೇಸ್ ಸಿಗಲಿಲ್ಲ ಎಂಬ ಬೇಸರವಿತ್ತು. ಆದರೆ, ಇಲ್ಲಿ ರಮೇಶ್ ಅವರೊಂದಿಗೆ ಜಾಸ್ತಿ ಸ್ಕ್ರೀನ್​ಸ್ಪೇಸ್ ಸಿಕ್ಕಿದ್ದರಿಂದ ಆಸೆ ಈಡೇರಿತು. ಇನ್ನು ಅವರು ಕಥೆ ಹೇಳಿದಾಗ ತಕ್ಷಣ ಒಪ್ಪಿದೆ. ಅದರಲ್ಲೂ ಅವರದ್ದೇ ನಿರ್ದೇಶನ ಎಂದಾಗ ಸಖತ್ ಥ್ರಿಲ್ ಆಯಿತು’ ಎನ್ನುತ್ತ ರಮೇಶ್ ನಿರ್ದೇಶನದಲ್ಲಿ ಅಭಿನಯಿಸಿದ ಅನುಭವ ಹೇಳಿಕೊಂಡರು ರಚಿತಾ. ‘ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದೇ ದೊಡ್ಡ ಖುಷಿ. ಅಭಿನಯ ಸಹಜವಾಗಿ ಮೂಡಿಬರುವಂತೆ ಮಾಡುತ್ತಾರೆ. ನಿರ್ದೇಶನ, ಅಭಿನಯ ಎರಡನ್ನೂ ಮಾಡುವುದು ಹೆಕ್ಟಿಕ್ ಕೆಲಸ. ಆದರೆ, ಅವರು ಎರಡನ್ನೂ ನಗುನಗುತ್ತ ನಿಭಾಯಿಸಿದ್ದರು.

ರಮೇಶ್ ಅವರು ಶೂಟಿಂಗ್ ವೇಳೆ ಒಮ್ಮೆಯೂ ಜೋರಾಗಿ ಮಾತನಾಡಿದ್ದನ್ನು ನಾನು ನೋಡಿಲ್ಲ. ಯಾರು ಏನೇ ಎಂದರೂ ತಾಳ್ಮೆಯಿಂದ ಇರುತ್ತಿದ್ದರು. ಈ ಚಿತ್ರದಲ್ಲಿ ನಿಜಕ್ಕೂ ಅವರದ್ದು ಮಲ್ಟಿ ಟಾಸ್ಕಿಂಗ್. ಎಲ್ಲ ವಿಭಾಗದಲ್ಲೂ ಇನ್​ವಾಲ್ವ್ ಆಗುತ್ತಿದ್ದರು. ಬಹುಶಃ ನಿರ್ದೇಶಕರ ಕುರ್ಚಿಯಲ್ಲಿ ಕುಳಿತಾಕ್ಷಣ ಆ ಥರ ತಾಳ್ಮೆ ಬರುತ್ತೇನೋ?’ ಎನ್ನುವ ರಚಿತಾ, ನಿರ್ದೇಶನ ವಿಭಾಗದ ಬಗ್ಗೆ ಅಪಾರ ಗೌರವ ತೋರುತ್ತಾರೆ. ‘ಮುಂದೆ ಅನುಭವಕ್ಕಾಗಿ ನಾನು ಯಾರ ಜತೆಗಾದರೂ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಬಹುದೇ ಹೊರತು ನಿರ್ದೇಶನ ನನಗೆ ಒಗ್ಗುವಂಥದ್ದಲ್ಲ. ನಿರ್ಮಾಣ ಬೇಕಿದ್ದರೆ ಮಾಡಬಲ್ಲೆ, ನಿರ್ದೇಶನವಂತೂ ಖಂಡಿತ ಇಲ್ಲ. ನಿರ್ದೇಶನ ಎಂದರೆ ತುಂಬ ಜನ ಕಲಾವಿದರನ್ನು ನಿಭಾಯಿಸಬೇಕು. ಒಬ್ಬೊಬ್ಬರು ಒಂದೊಂದು ಮೂಡ್​ನಲ್ಲಿ ಇರುತ್ತಾರೆ. ನನ್ನಿಂದ ಅದು ಅಸಾಧ್ಯ’ ಎಂದು ಹೇಳುತ್ತಾರೆ ರಚಿತಾ. ‘ಈ ಸಿನಿಮಾದಲ್ಲಿ ಒಂದು ಆಕ್ಷನ್ ಸೀಕ್ವೆನ್ಸ್ ಇತ್ತು. ನಾನು ಮೇಲಿನಿಂದ ಕೆಳಕ್ಕೆ ಬೀಳಬೇಕಿತ್ತು. ಶೂ ಇದ್ದಿದ್ದರೆ ಪರವಾಗಿರಲಿಲ್ಲ, ಆದರೆ ಸಲ್ವಾರ್ ಮತ್ತು ಚಪ್ಪಲ್ ಹಾಕಿಕೊಂಡು ಜಿಗಿಯಬೇಕಾದ್ದರಿಂದ ಸ್ವಲ್ಪ ಭಯ ಆಯಿತು. ಅದು ನನಗೆ ಸಖತ್ ಚಾಲೆಂಜಿಂಗ್ ಎನಿಸಿದ ಸನ್ನಿವೇಶ’ ಎನ್ನುತ್ತಾರೆ ಅವರು.

ಎಲ್ಲ ದೇವರ ಆಶೀರ್ವಾದ: ಕಳೆದ ವರ್ಷ ಏಳು ಸಿನಿಮಾಗಳಲ್ಲಿ ನಟಿಸಿದ್ದ ರಚಿತಾ ಈ ವರ್ಷವೂ ಬಿಡುವಿಲ್ಲದ ನಟಿ. ಇಷ್ಟೊಂದು ಬೇಡಿಕೆಯ ನಟಿ ಎನಿಸಿಕೊಂಡಿದ್ದು ಹೇಗೆ ಎಂದರೆ, ‘ಕಳೆದೆರಡು ವರ್ಷವೂ ಚೆನ್ನಾಗಿತ್ತು. ಈ ವರ್ಷವೂ ಚೆನ್ನಾಗಿರುತ್ತದೆ ಎಂಬ ನಂಬಿಕೆ ಇದೆ. ಏಕೆಂದರೆ, ಒಳ್ಳೊಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಇದರಲ್ಲಿ ನನ್ನದೇನೂ ಇಲ್ಲ, ಎಲ್ಲ ದೇವರ ಆಶೀರ್ವಾದ ಅಷ್ಟೇ’ ಎನ್ನುತ್ತಾರೆ. ಇನ್ನು ಎಂಟು ವರ್ಷಗಳಿಂದ ಚಿತ್ರರಂಗದಲ್ಲಿರುವ ರಚಿತಾ, ‘ಇಷ್ಟು ವರ್ಷಗಳಲ್ಲಿ ಸಾಕಷ್ಟು ಕಲಿತಿದ್ದೇನೆ, ಕಲಿಯುತ್ತಲೇ ಇದ್ದೇನೆ, ಎಲ್ಲರೂ ಕಲಿಸುತ್ತಿದ್ದಾರೆ’ ಎನ್ನುತ್ತಾರೆ. ಅವರಿಗೆ ಭವಿಷ್ಯದ ಬಗ್ಗೆ ಅಂಥ ಕನಸುಗಳೇನೂ ಇಲ್ಲವಂತೆ. ‘ಏನೂ ಕೇಳದೆ ದೇವರು ಇಷ್ಟೆಲ್ಲ ಕೊಟ್ಟಿದ್ದಾನೆ. ಇನ್ನೂ ಕೇಳುವುದು ಅಥವಾ ಅದು ಬೇಕು ಇದು ಬೇಕು ಎಂದುಕೊಳ್ಳುವುದು ತಪ್ಪಾಗುತ್ತದೆ. ದೇವರು ಕೊಟ್ಟಿದ್ದನ್ನು ಸ್ವೀಕರಿಸಬೇಕು’ ಎಂಬ ಅಭಿಪ್ರಾಯ ರಚಿತಾ ಅವರದು.

ಕನ್ನಡ ಚಿತ್ರರಂಗ ನಮ್ಮ ಮನೆ ಥರ: ರಚಿತಾ ಈ ವರ್ಷ ಟಾಲಿವುಡ್​ಗೂ ಪ್ರವೇಶಿಸಿದ್ದಾರೆ. ಅಲ್ಲಿ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಅಭಿನಯದ ‘ಸೂಪರ್ ಮಚ್ಚಿ’ ಚಿತ್ರಕ್ಕೆ ನಾಯಕಿ ಆಗಿ ನಟಿಸುತ್ತಿದ್ದಾರೆ. ‘ಅಲ್ಲಿ ಯಾರೂ ಪರಿಚಯ ಇರದ್ದರಿಂದ ನಾನು ಯಾರೊಂದಿಗೂ ಬೆರೆಯುತ್ತಿಲ್ಲ. ನಾನಾಯ್ತು ನನ್ನ ಕೆಲಸವಾಯಿತು ಎಂಬಂತೆ ಇರುತ್ತೇನೆ. ಅದೇ ಕಾರಣಕ್ಕೆ ಈಗ ಪುಸ್ತಕ ಓದುವುದೂ ಅಭ್ಯಾಸವಾಗಿ ಬಿಟ್ಟಿದೆ. ಆದರೆ, ಇಲ್ಲಿ ಕನ್ನಡ ಚಿತ್ರರಂಗದಲ್ಲಿ ನಾನು ಎಲ್ಲರೊಂದಿಗೆ ಬೆರೆಯುತ್ತ, ಅವರಲ್ಲಿ ಒಬ್ಬಳಾಗಿ ಇರುತ್ತೇನೆ. ಸೆಟ್​ನಲ್ಲಿ ಯಾರಾದರೂ ಡಲ್ ಆಗಿದ್ದರೆ ಅವರಿಗೆ ಖುಷಿ ಆಗಿರುವಂತೆ ಹೇಳುತ್ತೇನೆ. ಬೇರೆ ಚಿತ್ರರಂಗ ನೆಂಟರ ಮನೆ ಇದ್ದ ಹಾಗೆ, ಅಡ್ಜಸ್ಟ್ ಆಗಲು ಟೈಮ್ ಬೇಕಾಗುತ್ತದೆ. ಆದರೆ, ಕನ್ನಡ ಚಿತ್ರರಂಗ ನಮ್ಮ ಮನೆ ಇದ್ದ ಹಾಗೆ’ ಎನ್ನುತ್ತಾರೆ ರಚಿತಾ.

|ರವಿಕಾಂತ್​ ಕುಂದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net