

ಬೆಂಗಳೂರು: ಪ್ರಪಂಚದಲ್ಲಿ ಕರೊನಾ ವೈರಸ್ ಭೀತಿ ಹೆಚ್ಚಾಗಿದೆ. ಒಂದತ್ತ ಕರೊನಾ ಭೀತಿಯಲ್ಲಿ ಜನರಿದ್ದರೆ ಇನ್ನೊಂದತ್ತ ವೈರಸ್ನ ಕುರಿತಾಗಿ ಸುಳ್ಳು ಸುದ್ದಿಗಳು ಎಲ್ಲೆಡೆ ಹರಿದಾಡಲಾರಂಭಿಸಿವೆ. ಅದೇ ರೀತಿಯಲ್ಲಿ ಆಲ್ಕೋಹಾಲ್ ಕುಡಿದರೆ ಕರೊನೊ ಬರುವುದಿಲ್ಲ ಎನ್ನುವ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅದರ ನಿಜಾಂಶ ಇದೀಗ ಹೊರಬಿದ್ದಿದೆ.
ಆಲ್ಕೋಹಾಲ್ ಸೇವಿಸುವುದರಿಂದ ಕರೊನಾ ವೈರಸ್ನ್ನು ತಡೆಗಟ್ಟಬಹುದು ಎಂದು ಅಮೆರಿಕದ ಕಾನ್ಸಾಸ್ ನಗರದಲ್ಲಿರುವ ಸೇಂಟ್ ಲ್ಯೂಕ್ಸ್ ಆಸ್ಪತ್ರೆ ತಿಳಿಸಿದೆ ಎನ್ನಲಾಗಿತ್ತು. ಅದಕ್ಕೆ ತಕ್ಕಂತೆ ಆ ಆಸ್ಪತ್ರೆಯ ಹೆಸರಿರುವ ಪತ್ರವೊಂದು ಸಕತ್ ಸುದ್ದಿ ಮಾಡಿತ್ತು. ವೋಡ್ಕಾಗಳು ಅತ್ಯಂತ ಉತ್ತಮ ಸ್ಯಾನಿಟೈಸರ್ಗಳು ಎಂದೂ ಸಹ ಆ ಪತ್ರದಲ್ಲಿ ಹೇಳಿದ್ದನ್ನು ಕಾಣಬಹುದಾಗಿತ್ತು.
ಆದರೆ ಈ ಸುದ್ದಿ ಸುಳ್ಳು, ಸೇಂಟ್ ಲೂಕ್ಸ್ ಆಸ್ಪತ್ರೆ ಕರೊನಾ ವಿಚಾರದಲ್ಲಿ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ ಎನ್ನುವ ವಿಚಾರವನ್ನು ಇಂಡಿಯಾ ಟುಡೇಯ ಆ್ಯಂಟಿ ಫೇಕ್ ನ್ಯೂಸ್ ವಾರ್ ವಿಭಾಗ ಬಯಲು ಮಾಡಿದೆ.
ಸ್ವತಃ ಸೇಂಟ್ ಲೂಕ್ಸ್ ಆಸ್ಪತ್ರೆಯವರೇ ಈ ಸುದ್ದಿ ಸುಳ್ಳು ಎಂದು ಫೇಸ್ಬುಕ್ನಲ್ಲಿ ತಮ್ಮ ಅಧಿಕೃತ ಖಾತೆಯ ಮೂಲಕ ತಿಳಿಸಿದ್ದಾರೆ. ಇದೊಂದು ಸುಳ್ಳು ಸುದ್ದಿ ಎಂದು ತಿಳಿಸಿರುವ ಆಸ್ಪತ್ರೆ ಕರೊನಾ ಬರದಿರುವಂತೆ ತಡೆಯಲು ಯಾವ ಮುನ್ನೆಚ್ಚರಿಕಾ ಕ್ರಮವನ್ನು ಅನುಸರಿಸಬೇಕು ಎಂದು ಪೋಸ್ಟ್ನಲ್ಲಿ ತಿಳಿಸಿದೆ.
ವೋಡ್ಕಾವನ್ನು ಸ್ಯಾನಿಟೈಸರ್ ಆಗಿ ಬಳಸುವುದರಿಂದ ಕರೊನಾ ತಪ್ಪಿಸಬಹುದು ಎನ್ನುವ ವಿಚಾರದ ಬಗ್ಗೆ ವೋಡ್ಕಾ ಸಂಸ್ಥೆಯೊಂದು ಉತ್ತರ ನೀಡಿದೆ. ಈ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಟಿಟೋಸ್ ಹ್ಯಾಂಡ್ ಮೇಡ್ ವೋಡ್ಕಾ ಸಂಸ್ಥೆ, "ಸ್ಯಾನಿಟೈಸರ್ಗಳಲ್ಲಿ ಶೇ.60 ಆಲ್ಕೋಹಾಲ್ ಇರುತ್ತದೆ. ಆದರೆ ನಾವು ತಯಾರಿಸುತ್ತಿರುವ ವೋಡ್ಕಾಗಳಲ್ಲಿ ಶೇ.40 ಮಾತ್ರ ಆಲ್ಕೋಹಾಲ್ ಇದೆ. ಆದ್ದರಿಂದ ಇದನ್ನು ಸ್ಯಾನಿಟೈರಸ್ ಆಗಿ ಬಳಸಲಾಗುವುದಿಲ್ಲ" ಎಂದು ತಿಳಿಸಿದೆ.
ಕರೊನಾ ವಿಚಾರದಲ್ಲಿ ಕೇವಲ ಆಲ್ಕೋಹಾಲ್ ಮಾತ್ರವಲ್ಲದೆ ಅನೇಕ ಸುಳ್ಳ ವದಂತಿಗಳನ್ನು ಹರದಡಲಾಗುತ್ತಿದೆ.(ಏಜೆನ್ಸೀಸ್)