ಐಪಿಎಲ್​ ಮೇಲೆ ಕರೊನಾ ಕರಿನೆರಳು: ಚುಟುಕು ಕ್ರಿಕೆಟ್​ ಟೂರ್ನಿ ನಡೆಸಲು ಬಿಸಿಸಿಐ ಪ್ಲ್ಯಾನ್​ ಏನಿರಬಹುದು? ಸಫಲವಾಗುವುದೇ?

IPL Closed door
Published on

ನವದೆಹಲಿ: ಕ್ರೀಡಾಭಿಮಾನಿಗಳ ಫೇವರಿಟ್​ ಇಂಡಿಯನ್​ ಪ್ರೀಮಿಯರ್​ ಲೀಗ್​(ಐಪಿಎಲ್​) ಮೇಲೂ ಕರೊನಾ ಕರಿನೆರಳು ಕವಿದಿದೆ. ಮಾರ್ಚ್​ 29ರಿಂದ ಆರಂಭವಾಗುವ ಟೂರ್ನಿಗೆ ಸಾರ್ವಜನಿಕ ವೀಕ್ಷಣೆ ಅವಕಾಶ ನೀಡದೆ, ಖಾಲಿ ಕ್ರೀಡಾಂಗಣದಲ್ಲಿ ಟೂರ್ನಿ ನಡೆಸುವ ಬಗ್ಗೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ಚರ್ಚೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಮುಚ್ಚಿದ ಕ್ರೀಡಾಂಗಣದ ಒಳಗೆ ಐಪಿಎಲ್​ ನಡೆಸುವ ಸಾಧ್ಯತೆ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೇವೆ. ಹಾಗೇ ತಂಡಗಳಿಗೆ ನೀಡುವ ಪರಿಹಾರದ ಬಗ್ಗೆಯೂ ಶನಿವಾರ ಚರ್ಚೆ ನಡೆಸುತ್ತೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರೊನಾ ವೈರಸ್​ ಜಗತ್ತಿನೆಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ಜನ ಸೇರುವ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ಕ್ರೀಡಾ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ. ಅಲ್ಲದೆ, ರಾಜತಾಂತ್ರಿಕ ಮತ್ತು ಉದ್ಯೋಗ ಹೊರತುಪಡಿಸಿ ಸದ್ಯ ಅಸ್ತಿತ್ವದಲ್ಲಿರುವ ಎಲ್ಲ ವೀಸಾಗಳನ್ನು ಏಪ್ರಿಲ್​ 15ರವರೆಗೆ ಬ್ಯಾನ್​ ಮಾಡುವಂತೆ ಕೇಂದ್ರ ಸರ್ಕಾರ ಹೊಸದಾಗಿ ಸಲಹೆಯನ್ನು ನೀಡಿದೆ.

ಹೀಗಾಗಿ ಬಹುತೇಕ ಐಪಿಎಲ್​ ಟೂರ್ನಿಗೆ ಹೊಡೆತ ಬೀಳುವ ಸಾಧ್ಯತೆ ಇದೆ. ವೀಸಾ ರದ್ದು ಮಾಡಿರುವುದರಿಂದ ವಿದೇಶಿ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮುಚ್ಚಿದ ಬಾಗಿಲ ಹಿಂದೆ ಟೂರ್ನಿ ನಡೆಸುವ ಬಿಸಿಸಿಐ ಮಾತುಕತೆ ಸಫಲವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಏಕೆಂದರೆ ಭಾರತದಲ್ಲಿ ಐಪಿಎಲ್​ ಅನ್ನು ಕ್ರೀಡಾಭಿಮಾನಿಗಳ ಹಬ್ಬವೆಂದೇ ಪರಿಗಣಿಸಲಾಗಿದೆ.

ಬಿಸಿಸಿಐ ಸೇರಿದಂತೆ ರಾಷ್ಟ್ರೀಯ ಒಕ್ಕೂಟಗಳಿಗೆ ಆರೋಗ್ಯ ಸಚಿವಾಲಯದ ಸಲಹೆಗಳನ್ನು ಪಾಲಿಸುವಂತೆ ಕ್ರೀಡಾ ಸಚಿವಾಲಯ ಕೇಳಿದೆ. ಕರೊನಾ ವೈರಸ್​ ಸೋಂಕು ಮನಸ್ಸಿನಲ್ಲಿಟ್ಟುಕೊಂಡು ಸಾರ್ವಜನಿಕರು ಒಂದೆಡೆ ಸೇರುವುದನ್ನು ತಡೆಗಟ್ಟಲು ಸರ್ಕಾರ ಕೈಗೊಳ್ಳುವ ಕ್ರಮವನ್ನು ಅನುಸರಿಸಬೇಕೆಂದು ಕ್ರೀಡಾ ಸಚಿವಾಲಯ ಕೇಳಿದೆ.

ಸದ್ಯ ಬಿಸಿಸಿಐನಲ್ಲಿ ಚರ್ಚೆಯಾಗುತ್ತಿರುವ ಮುಚ್ಚಿದ ಬಾಗಿಲ ಹಿಂದಿನ ಐಪಿಎಲ್​ ಸಫಲವಾಗದೇ ಇದ್ದಲ್ಲಿ, ಐಪಿಎಲ್​ ಟೂರ್ನಿಯನ್ನು ಮುಂದೂಡುವ ಸಾಧ್ಯತೆಯೂ ಇದೆ ಎಂದೂ ಹೇಳಲಾಗುತ್ತಿದೆ.

ಅಂದಹಾಗೆ ಐಪಿಎಲ್​ ಆಡಳಿತ ಮಂಡಳಿ ಮಾರ್ಚ್​ 14ರಂದು ಸಭೆ ಸೇರಲಿದ್ದು ಈ ಬಾರಿಯ ಐಪಿಎಲ್​ ಹಣೆಬರಹವನ್ನು ನಿರ್ಧರಿಸಲಿದೆ. ಒಂದು ವೇಳೆ ಅಂದುಕೊಂಡಂತೆ ಟೂರ್ನಿ ಆರಂಭಿಸಲು ನಿರ್ಧಾರ ಕೈಗೊಂಡಲ್ಲಿ ಮಾರ್ಚ್​ 29ರಿಂದ ಐಪಿಎಲ್​ ಆರಂಭಗೊಳ್ಳಲಿದೆ. ಮೊದಲ ಪಂದ್ಯ ಮುಂಬೈ ಇಂಡಿಯನ್ಸ್​ ಮತ್ತು ಚೆನ್ನೈ ಸೂಪರ್​​ ಕಿಂಗ್ಸ್​ ನಡುವೆ ನಡೆಯಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net