ಜ್ಯೋತಿರಾದಿತ್ಯ ಸಿಂಧಿಯಾರ ಕೈ ಹಿಡಿದು ಸ್ವಾಗತ ಕೋರಿದ ಅಮಿತ್​ ಷಾ; ಪಕ್ಷದ ಬಲ ಹೆಚ್ಚಿತು ಎಂದ್ರು ರಾಜನಾಥ್​ ಸಿಂಗ್​

Amit Shah 12 March 20
Published on

ನವದೆಹಲಿ: ಬಿಜೆಪಿ ಸೇರ್ಪಡೆಯಾದ ಸಿಂಧಿಯಾ ರಾಜವಂಶಸ್ಥ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಇಂದು ಗೃಹ ಸಚಿವ ಅಮಿತ್ ಷಾ ಬಿಜೆಪಿಗೆಸ್ವಾಗತ ಕೋರಿದ್ದಾರೆ.

ತಾವು ಜ್ಯೋತಿರಾದಿತ್ಯ ಸಿಂಧಿಯಾ ಕೈ ಹಿಡಿದುಕೊಂಡು ಅವರಿಗೆ ಸ್ವಾಗತ ಕೋರುತ್ತಿರುವ ಫೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ಅಮಿತ್​ ಷಾ, ಇಂದು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿದೆ. ಸಿಂಧಿಯಾ ಜೀ ಅವರು ನಮ್ಮ ಪಕ್ಷಕ್ಕೆ ಸೇರಿದ್ದರಿಂದ, ಮಧ್ಯಪ್ರದೇಶದ ಜನರಿಗೆ ಸೇವೆ ಸಲ್ಲಿಸುವ ಬಿಜೆಪಿಯ ಸಂಕಲ್ಪಕ್ಕೆ ಮತ್ತಷ್ಟು ಬಲಬಂದಂತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇಂದು ಬೆಳಗ್ಗೆ ಮೊದಲು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಬಳಿಕ ಅಮಿತ್ ಷಾ ಅವರ ಭೇಟಿಗೆ ತೆರಳಿದ್ದರು. ರಾಜನಾಥ್​ ಸಿಂಗ್ ಕೂಡ ಟ್ವೀಟ್​ ಮೂಲಕ ಬಿಜೆಪಿಯ ಹೊಸ ನಾಯಕನಿಗೆ ಸ್ವಾಗತ ಕೋರಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಸೇರ್ಪಡೆ ಬಿಜೆಪಿಯ ಬಲ ಹೆಚ್ಚಲು ಸಹಾಯವಾಗುತ್ತದೆ. ಅವರ ಎಲ್ಲ ಆಶಯಗಳೂ ಈಡೇರಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದರು.

ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ (ಮಾ.10) ನವದೆಹಲಿಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್​ ಷಾ ಅವರನ್ನು ಭೇಟಿಯಾಗಿದ್ದರು. ಅದಾದ ಕೆಲವೇ ಹೊತ್ತಲ್ಲಿ ಕಾಂಗ್ರೆಸ್​ಗೆ ನೀಡಿದ ರಾಜೀನಾಮೆ ಪತ್ರವನ್ನು ಬಹಿರಂಗಗೊಳಿಸಿದ್ದರು. ನಂತರ ಮಾ.11ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net