

ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ತನಿಖೆ ಮಾಡಿದಷ್ಟೂ ಹೊಸ ಆತಂಕಕಾರಿ ವಿಚಾರಗಳು ಹೊರಬರುತ್ತಿವೆ. ಇಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಇ)ದ ಅಧ್ಯಕ್ಷ ಫರ್ವೇಜ್ ಮತ್ತು ಕಾರ್ಯದರ್ಶಿ ಇಲಿಯಾಸ್ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಈಶಾನ್ಯ ದೆಹಲಿ ಹಿಂಸಾಚಾರ, ಸಿಎಎ ವಿರುದ್ಧದ ಪ್ರತಿಭಟನೆಗೆ ಹಣಕಾಸಿನ ನೆರವು ನೀಡಿದ್ದಾರೆ ಎಂಬ ಆರೋಪದಡಿ ಪಿಎಫ್ಇ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ಬಂಧನವಾದ ಬೆನ್ನಲ್ಲೇ ಒಂದು ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ಲಷ್ಕರ್ ಎ ತೊಯ್ಬಾ ಸಂಸ್ಥಾಪಕ ಉಗ್ರ ಹಫೀಜ್ ಸಯೀದ್ನೊಂದಿಗೆ ಸಂಪರ್ಕದಲ್ಲಿರುವ ಇಂಡೋನೇಷಿಯಾ ಮೂಲದ ಎನ್ಜಿಒವೊಂದು ದೆಹಲಿ ಹಿಂಸಾಚಾರಕ್ಕೆ ಹಣ ಸಹಾಯ ನೀಡಿದೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಸಿಎಎಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಪ್ರತಿಭಟನೆಗೆ ಹಿಂಸಾಚಾರ ರೂಪ ನೀಡಲು ಗಲಭೆಕೋರರಿಗೆ ಇಂಡೋನೇಷಿಯಾ ಮೂಲದ ಎ.ಸಿ.ಟಿ.ಎಂಬ ಮುಸ್ಲಿಂ ಎನ್ಜಿಒ 25 ಲಕ್ಷ ರೂಪಾಯಿ ಧನಸಹಾಯವನ್ನು ದೆಹಲಿಯ ಸಂಘಟನೆಯೊಂದರ ಮೂಲಕ ನೀಡುವ ಯತ್ನ ಮಾಡಿತ್ತು ಎಂಬ ಮಾಹಿತಿ ತನಿಖಾ ಮೂಲಗಳಿಂದ ಹೊರಬಿದ್ದಿದ್ದಾಗಿ ಮಾಧ್ಯಮ ವರದಿ ಮಾಡಿದೆ.
ಈ ಎ.ಸಿ.ಟಿ. ಎನ್ಜಿಒ ಸಹಾಯದ ಹೆಸರಲ್ಲಿ ಜಗತ್ತಿನ ಅನೇಕ ಮುಸ್ಲಿಂ ದೇಶಗಳಲ್ಲಿ ಹಣಕಾಸು ಒದಗಿಸುತ್ತಿದೆ. ಬಾಂಗ್ಲಾದೇಶದ ಕಾಕ್ಸ್ ಬಜಾರ್ನಲ್ಲಿ ರೊಹಿಂಗ್ಯಾ ಶಿಬಿರವನ್ನೂ ಸ್ಥಾಪಿಸಿದೆ ಎಂದು ಹೇಳಲಾಗಿದೆ.
ಫೆ.23ರಿಂದ ಈಶಾನ್ಯ ದೆಹಲಿ ಸೇರಿ ಹಲವು ಪ್ರದೇಶಗಳಲ್ಲಿ ಸಿಎಎ ಪರ-ವಿರೋಧಿ ಬಣಗಳ ನಡುವೆ ಸಂಘರ್ಷ ಭುಗಿಲೆದ್ದು, ಅದು ಹಿಂಸಾಚಾರಕ್ಕೆ ತಲುಪಿತ್ತು. ಒಂದುವಾರ ನಡೆದ ಗಲಭೆಯಲ್ಲಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅನೇಕರು ಮನೆ, ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. (ಏಜೆನ್ಸೀಸ್)