

ಬೆಂಗಳೂರು: ನಟಿ ರಚಿತಾ ರಾಮ್ ಸದ್ಯ ಸ್ಯಾಂಡಲ್ವುಡ್ನ ಬಿಜಿ ನಟಿಯರ ಸಾಲಿನಲ್ಲಿದ್ದಾರೆ. ಒಂದಾದ ನಂತರ ಒಂದು ಸಿನಿಮಾ ಒಪ್ಪಿಕೊಳ್ಳುತ್ತ ಚಿತ್ರೀಕರಣಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗಲೇ, ಶ್ರೀರಾಮ ನವಮಿ ಪ್ರಯುಕ್ತ ‘ಶಬರಿ - ಸರ್ಚಿಂಗ್ ಫಾರ್ ರಾವಣ’ ಎಂಬ ಹೊಸ ಚಿತ್ರ ಒಪ್ಪಿಕೊಂಡಿದ್ದರು. ಫಸ್ಟ್ಲುಕ್ ಮೂಲಕವೇ ಈ ಚಿತ್ರ ಸಾಕಷ್ಟು ಸುದ್ದಿಯಲ್ಲಿತ್ತು. ಇದೀಗ ಸದ್ದಿಲ್ಲದೆ ಚಿತ್ರದ ಮುಹೂರ್ತ ಮುಗಿದಿದೆ. ಚಿತ್ರೀಕರಣಕ್ಕೂ ತಂಡ ಸಜ್ಜಾಗಿದೆ. ರಚಿತಾಗೆ ಹಿಂದೆಂದೂ ಕಾಣಿಸದ ಹೊಸ ಅವತಾರ ಈ ಸಿನಿಮಾದಲ್ಲಿ ಇರಲಿದೆ ಎನ್ನುವ ನಿರ್ದೇಶಕ ನವೀನ್ ಶೆಟ್ಟಿ, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
‘ರಚಿತಾ ಅವರಿಗೆ ಈ ಸಿನಿಮಾದಲ್ಲಿ ವಿಶೇಷ ಪಾತ್ರವಿದೆ. ಇದೊಂದು ರಿವೆಂಜ್ ಥ್ರಿಲ್ಲರ್ ಚಿತ್ರವಾಗಿರುವುದರಿಂದ ಎರಡು ಶೇಡ್ಗಳಲ್ಲಿ ಅವರನ್ನು ನೋಡಬಹುದು. ಶಬರಿ ಶೀರ್ಷಿಕೆಗೆ ತಕ್ಕಂತೆ ತಾಳ್ಮೆ ಒಂದೆಡೆಯಾದರೆ, ಅವರ ರೌದ್ರಾವತಾರವೂ ಚಿತ್ರದ ಹೈಲೈಟ್. ಮೊದಲ ಬಾರಿ ಈ ಚಿತ್ರದಲ್ಲಿ ರಚಿತಾ ಅವರಿಗೆ ರಘು ಮುಖರ್ಜಿ ಜೋಡಿಯಾಗಿದ್ದಾರೆ. ಆಗಸ್ಟ್ 3ರಿಂದ ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ’ ಎನ್ನುತ್ತಾರೆ. ಶಬರಿಯಾಗಿ ರಚಿತಾ ಕಾಣಿಸಿಕೊಂಡರೆ, ರಾವಣ ಯಾರು? ‘ಚಿತ್ರದ ಪ್ರಧಾನ ಪಾತ್ರ ರಾವಣ. ಹೊಸಬರನ್ನೇ ಪರಿಚಯಿಸುವ ಸಲುವಾಗಿ ಆ ಪಾತ್ರಧಾರಿಗಾಗಿ ಹುಡುಕಾಟ ನಡೆದಿದೆ. ಇನ್ನೇನು ಶೀಘ್ರದಲ್ಲಿ ಆ ಪಾತ್ರವೂ ಅಂತಿಮವಾಗಲಿದೆ. ಮೊದಲ ಬಾರಿ ಎರಡು ಸಾಹಸ ದೃಶ್ಯಗಳಲ್ಲಿ ರಚಿತಾ ಅವರು ಫೈಟ್ ಮಾಡಲಿದ್ದಾರೆ’ ಎನ್ನುತ್ತಾರೆ ನಿರ್ದೇಶಕರು. ಚಿತ್ರಕ್ಕೆ ಅನೂಪ್ ಸೀಳಿನ ಸಂಗೀತ, ವಿಶಾಲ್ ಕುಮಾರ್ ಗೌಡ ಛಾಯಾಗ್ರಹಣ ಇರಲಿದೆ. ಕೆಕೆ ಪ್ರೊಡಕ್ಷನ್ಸ್ ಮತ್ತು ಎಟಿಎಂ ಸ್ಟುಡಿಯೋಸ್ ಬ್ಯಾನರ್ನಲ್ಲಿ ಚಿತ್ರ ನಿರ್ವಣವಾಗುತ್ತಿದೆ.