

ಹೈದರಾಬಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸೊಸೆ ಹಾಗೂ ಸೂಪರ್ಸ್ಟಾರ್ ರಾಮ್ಚರಣ್ ಪತ್ನಿ ಉಪಾಸನ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಅಪೊಲೋ ಚಾರಿಟಿಯ ಉಪಾಧ್ಯಕ್ಷೆಯಾಗಿರುವ ಉಪಾಸನ ನಿನ್ನೆ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಟ್ವಿಟ್ಟರ್ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು. ದೇವಸ್ಥಾನ ಗೋಪುರದ ಫೋಟೋವನ್ನು ಪೋಸ್ಟ್ ಮಾಡಿ ಅದರಲ್ಲಿ ರಾಮ್ಚರಣ್ ಮತ್ತು ತನ್ನನ್ನು ಗುರುತಿಸುವಂತೆ ಅಭಿಮಾನಿಗಳನ್ನು ಕೇಳಿದ್ದರು. ಆದರೆ, ಈ ಪೊಸ್ಟ್ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದೆ.
ಪೋಸ್ಟ್ ಮಾಡಿರುವ ಉಪಾಸನ, ಈ ಚಿತ್ರಕ್ಕೊಂದು ಅಡಿಬರಹ ನೀಡಿ. ಅಡೆತಡೆಗಳಿಲ್ಲದೆ ಸಕ್ರಿಯ ಒಳಗೊಳ್ಳುವಿಕೆ ಮತ್ತು ಸೇರ್ಪಡೆಯ ಮೂಲಕ ಪ್ರಗತಿಶೀಲ, ಹೆಚ್ಚು ಸಹಿಷ್ಣು ರಾಷ್ಟ್ರವನ್ನು ನಿರ್ಮಿಸಲು ನಾವು ತೊಡಗಿಸಿಕೊಳ್ಳೋಣ. ಎಲ್ಲರಿಗೂ ಗಣರಾಜ್ಯೋತ್ಸವ ಶುಭಾಶಯಗಳು ಎಂದು ಬರೆದಿರುವ ಉಪಾಸನ ಕೊನೆಯಲ್ಲಿ ಈ ಚಿತ್ರದಲ್ಲಿ ರಾಮ್ಚರಣ್ ಮತ್ತು ನನ್ನು ಪತ್ತೆಹಚ್ಚಿ ಎಂದು ಹೇಳಿದ್ದಾರೆ.
ಉಪಾಸನಾ ಪೋಸ್ಟ್ ಮಾಡಿದ್ದ ಗೋಪುರದ ಫೋಟೋದಲ್ಲಿ ದೇವರುಗಳ ಬದಲು ಕೆಲವ ವ್ಯಕ್ತಿಗಳ ಫೋಟೋಗಳು ಇವೆ. ಇದರಿಂದ ಅಸಮಾಧಾನಗೊಂಡಿರುವ ಕೆಲ ನೆಟ್ಟಿಗರು ಇದು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವಂತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಫೋಟೋವನ್ನು ತೆಗೆದು ಹಾಕುವಂತೆ ಒತ್ತಾಯ ಮಾಡಿದ್ದಾರೆ. ಆದರೆ, ಇದುವರೆಗೂ ಈ ಬಗ್ಗೆ ಉಪಾಸನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್)