ಶೂಟಿಂಗ್​ ವೇಳೆ ತ್ರಿಶಾ ಕೃಷ್ಣನ್​ ಎಡವಟ್ಟು! ಸೌತ್​ ಬ್ಯೂಟಿಗೆ ಎದುರಾಗಿದೆ ಬಂಧನದ ಭೀತಿ..!

Actress Trisha
Published on

ಚೆನ್ನೈ: ಸೌತ್​ ಬ್ಯೂಟಿ ತ್ರಿಶಾ ತಮ್ಮ ಮುಂದಿನ ಹೈಬಜೆಟ್​ ಚಿತ್ರ "ಪೊನ್ನಿನ್ ಸೆಲ್ವನ್" ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸುತ್ತಿದ್ದಾರೆ. ಪೊನ್ನಿನ್ ಸೆಲ್ವನ್ ಚಿತ್ರವನ್ನು ಅದೇ ಹೆಸರಿನ ತಮಿಳು ಕಾದಂಬರಿ ಆಧರಿಸಿ ಮಾಡಲಾಗುತ್ತಿದೆ. ಇದೀಗ ಚಿತ್ರೀಕರಣ ಸಮಯದಲ್ಲಿ ತ್ರಿಶಾ ಎಡವಟ್ಟೊಂದನ್ನು ಮಾಡಿಕೊಂಡಿದ್ದು ಬಂಧನದ ಭೀತಿ ಎದುರಿಸುತ್ತಿದ್ದಾರೆ.

ತಮಿಳುನಾಡಿನ ಹಿಂದು ಸಂಘಟನೆಗಳು ತ್ರಿಶಾ ಮತ್ತು ಮಣಿರತ್ನಂರನ್ನು ಬಂಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಸದ್ಯ ಪೊನ್ನಿನ್ ಸೆಲ್ವನ್ ಚಿತ್ರವನ್ನು ತಮಿಳುನಾಡಿನ ಐತಿಹಾಸಿಕ ದೇವಸ್ಥಾನವೊಂದರ ಒಳಗಡೆ ಶೂಟ್​ ಮಾಡಲಾಗುತ್ತಿದೆ. ತ್ರಿಶಾರ ಮಹತ್ವದ ಪಾತ್ರಗಳನ್ನು ಸೆರೆಹಿಡಿಯಲಾಗುತ್ತಿದೆ.

ಶೂಟಿಂಗ್​ ಗ್ಯಾಪ್​ನಲ್ಲಿ ನಟಿ ತ್ರಿಶಾ ಚಪ್ಪಲಿ ಹಾಕಿಕೊಂಡೆ ದೇವಸ್ಥಾನದ ಒಳಗೆ ಓಡಾಡಿದ್ದಾರೆ. ಶಿವಲಿಂಗ ಮತ್ತು ನಂದಿಯ ನಡುವೆ ತ್ರಿಶಾ ಚಪ್ಪಲಿ ಹಾಕಿಕೊಂಡು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಹಿಂದು ಸಂಘಟನೆಗಳು ಧಾರ್ಮಿಕ ಭಾವನೆಗೆ ಧಕ್ಕೆ ತಂದೆ ತ್ರಿಶಾರನ್ನು ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ತೀವ್ರ ಒತ್ತಾಯ ಕೇಳಿಬಂದಿದ್ದು, ತ್ರಿಶಾಗೆ ಬಂಧನ ಭೀತಿ ಕಾಡಲು ಶುರುವಾಗಿದೆ.

ಅಂದಹಾಗೆ ಪೊನ್ನಿನ್​ ಸೆಲ್ವನ್​ ಚಿತ್ರವೂ ಎರಡು ಭಾಗಗಳಲ್ಲಿ ಮೂಡಿಬರಲಿದೆ. ಈ ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್​, ಚಿಯಾನ್​ ವಿಕ್ರಮ್​, ಜಯಂ ರವಿ, ಕಾರ್ತಿ, ಪ್ರಕಾಶ್​ ರಾಜ್​, ಜಯರಾಮ್​, ಪ್ರಭು, ಐಶ್ವರ್ಯ ಲಕ್ಷ್ಮೀ, ಸೋಬಿತಾ ಧುಲಿಪಲ, ಲಾಲ್​ ಮತ್ತು ಇನ್ನು ಹಲವಾರು ನಟರು ನಟಿಸಿದ್ದು, ಈ ಚಿತ್ರ ಬಹುತಾರಾಗಣವನ್ನು ಹೊಂದಿದೆ. ಚಿತ್ರದ ಮೊದಲನೇ ಭಾಗ 2022ಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ ಎಂದು ತಿಳಿದುಬಂದಿದೆ. ಸಂಗೀತ ಮಾತ್ರಿಕ ಎ.ಆರ್​. ರೆಹಮಾನ್​ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net