

ಬೆಂಗಳೂರು: ಕನ್ನಡಿಗರ ಮನೆ ಮಗನಾಗಿದ್ದ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣ ಇನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ಬಗ್ಗೆ ಅನೇಕರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ನಟ ಸುದೀಪ್ ಎರಡು ಬಾರಿ ಅಪ್ಪು ಬಗ್ಗೆ ಸುದೀರ್ಘ ಭಾವುಕ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ನಟಿ ರಮ್ಯಾ ಕೂಡ ತಮ್ಮ ಫೇಸ್ಬುಕ್ನಲ್ಲಿ ಅಪ್ಪು ಬಗ್ಗೆ ಭಾವುಕವಾಗಿ ಬರೆದುಕೊಂಡಿದ್ದಾರೆ.
ರಮ್ಯಾರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೆ ರಾಜ್ ಕುಟುಂಬ. ನಾಯಕನಾಗಿ ಪುನೀತ್ ಅವರ ಎರಡನೇ ಚಿತ್ರ "ಅಭಿ" ಮೂಲಕ ಸಿನಿ ರಂಗಕ್ಕೆ ಪರಿಚಯವಾದ ರಮ್ಯಾ ಆ ನಂತರ ಸಾಕಷ್ಟು ಯಶಸ್ಸು ಗಳಿಸಿ, ಒಳ್ಳೆಯ ಹೆಸರು ಮಾಡಿದರು. ರಾಜಕೀಯದಲ್ಲೂ ತಮ್ಮದೇ ಛಾಪು ಮೂಡಿಸಿದರು. ಅಭಿ, ಆಕಾಶ್ ಮತ್ತು ಅರಸು ಸೇರಿ ಮೂರು ಚಿತ್ರಗಳಲ್ಲಿ ಅಪ್ಪು ಜತೆ ರಮ್ಯಾ ಜತೆಯಾಗಿ ನಟಿಸಿದ್ದಾರೆ. ಅಪ್ಪು ಅತಿಮ ದರ್ಶನವನ್ನು ರಮ್ಯಾ ಪಡೆದರು. ಇದೀಗ ಅಪ್ಪು ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದು, ಅದರ ಸಾರಾಂಶ ಈ ಕೆಳಕಂಡಂತಿದೆ.
ಅಪ್ಪು ಜೊತೆಯಲ್ಲಿ ನಾನು ಕಳೆದ ಬಹಳಷ್ಟು ನೆನಪುಗಳು ಅತ್ಯಮೂಲ್ಯ . ನಿಮ್ಮನ್ನು ನಾವು ಎಂದೆಂದಿಗೂ ನೆನೆಯುತ್ತೇವೆ. ಈ ಕಷ್ಟದ ಸಮಯದಲ್ಲಿ ಭಗವಂತ ಅಶ್ವಿನಿ ಮತ್ತು ಕುಟುಂಬಕ್ಕೆ ಧೈರ್ಯ ಮತ್ತು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮನ್ನು ಅಗಲಿರುವ ಇಂತ ಉನ್ನತ ವ್ಯಕ್ತಿಗೆ ಸಂತಾಪ ಸಲ್ಲಿಸುವ ಸಂದರ್ಭದಲ್ಲಿ ನಾನು ಅವರ ಅಭಿಮಾನಿಗಳ ಜೊತೆ ಇರುವೆನು.
ಅಪ್ಪು ಅವರ ಬಗ್ಗೆ ಹಲವರು ಬರೆದ ಎಲ್ಲಾ ಭಾವನಾತ್ಮಕ ಸಂದೇಶಗಳನ್ನು ಓದುತ್ತಿದ್ದೇನೆ ಮತ್ತು ಅವೆಲ್ಲವೂ ಅಕ್ಷರಶಃ ನಿಜ. ಕೆಲವಂತು ನನ್ನ ಕಣ್ಣಲ್ಲಿ ನೀರು ತಂದಿತು. ಅದುವೇ ಪುನೀತ್. ಹೌದು, ಅವರೇ ಅಪ್ಪು...
ಇವುಗಳನ್ನು ಓದಿದಾಗ ನನ್ನಲ್ಲಿ ಮೂಡಿದ ಕೆಲವು ಆಲೋಚನೆಗಳು ಇವು. ಒಬ್ಬ ವ್ಯಕ್ತಿಯನ್ನು ಜೀವಂತವಾಗಿಡಲು ಉತ್ತಮ ಮಾರ್ಗ ಯಾವುದು? ನೆನಪುಗಳಲ್ಲಿ ಅಲ್ಲ, ಏಕೆಂದರೆ ಅದು ಮಾಸಿ ಹೋಗುತ್ತವೆ. ಆದರೆ, ಅವರನ್ನು ಜೀವಂತವಾಗಿಡಲು ಒಂದು ಮಾರ್ಗವಿದೆ- ಅವರು ಬದುಕಿದ ರೀತಿಯಲ್ಲಿ ಪ್ರತಿದಿನ ನಾವು ಬದುಕುವುದು. ಅವರಂತೆಯೇ ನಾವು ಪ್ರೀತಿ ಹಾಗೂ ಕರುಣಾಪೂರ್ಣ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರ ಮೂಲಕ ಅವರನ್ನು ಜೀವಂತವಾಗಿ ಇಡುವುದು. ದಿನನಿತ್ಯ ನಾವು ಅವರ ವ್ಯಕ್ತಿತ್ವವನ್ನು ಅನುಸರಿಸುವುದರ ಮೂಲಕ ನಾವು ಅವರನ್ನು ನಮ್ಮಲ್ಲಿ ಜೀವಂತವಾಗಿ ಇಡಲು ಸಾಧ್ಯ. ಈ ರೀತಿ ನಾವು ಅವರ ಮೌಲ್ಯಗಳನ್ನು ಮುಂದುವರಿಸಬಹುದು. ನಾವೆಲ್ಲರು ಅಪ್ಪುರನ್ನು ಪ್ರತಿ ದಿನವೂ ಆರಾಧಿಸೋಣ ಎಂದು ರಮ್ಯಾ, ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.