ನಟ ಧರಮ್ ತೇಜ್​ ಇತ್ತೀಚೆಗೆ ಖರೀದಿಸಿದ್ದ ದುಬಾರಿ ಬೈಕ್​ನಿಂದಲೇ ದುರಂತ: ಅದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

Sai Dharam Tej bike Crae
Published on

ಹೈದರಾಬಾದ್​: ಖ್ಯಾತ ತೆಲಗು ನಟ ಸಾಯಿ ಧರಮ್ ತೇಜ್ ಅವರು ಹೈದರಾಬಾದ್​ನ ಮಾದಾಪುರದ ಬಳಿ ಅಪಘಾತಕ್ಕಿಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ (ಸೆ.10) ರಾತ್ರಿ ಈ ಘಟನೆ ನಡೆದಿದೆ. ಭೀಕರ ಅಪಘಾತವಾದರೂ ಪ್ರಾಣಕ್ಕೆ ಯಾವುದೇ ಕುತ್ತಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಪೊಲೀಸ್​ ಮೂಲಗಳ ಪ್ರಕಾರ ಧರಮ್​ ತೇಜ್​ ಹೆಲ್ಮೆಟ್​ ಧರಿಸಿದ್ದರಿಂದ ಬದುಕುಳಿದಿದ್ದಾರೆಂದು ತಿಳಿಸಿದ್ದಾರೆ.

ಸದ್ಯ ಕೋಮಾದಲ್ಲಿರುವ ಧರಮ್​ ತೇಜ್​ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಎದೆಭಾಗ, ಬಲ ಭಾಗದ ಕಣ್ಣು, ಕೆಳಹೊಟ್ಟೆಗೆ ಗಾಯಗಳಾಗಿವೆ. ನಿನ್ನೆ ರಾತ್ರಿ 7.30ರ ಸುಮಾರಿಗೆ ಐಕಿಯಾ ಕೇಬಲ್​ ಬ್ರಿಡ್ಜ್​ನಲ್ಲಿ ಅಪಘಾತ ಸಂಭವಿಸಿದೆ. ಒಂದು ಮೂಲಗಳ ಪ್ರಕಾರ ರಸ್ತೆಯ ಮೇಲೆ ಮರಳು ಇದ್ದಿದ್ದರಿಂದ ವೇಗವಾಗಿ ಬಂದ ಬೈಕ್​ ನಿಯಂತ್ರಿಸಲಾಗದೇ ಸ್ಕಿಡ್​ ಆಗಿ ಅಪಘಾತವಾಗಿದೆ.

ಅಂದಹಾಗೆ ಧರಮ್​ ತೇಜ್​ ಬಳಿ ಇದ್ದಿದ್ದು ದುಬಾರಿ ಬೆಲೆಯ ಸ್ಪೋರ್ಟ್ಸ್​ ಬೈಕ್​. ಇತ್ತೀಚೆಗಷ್ಟೇ ತೇಜ್​ ಬೈಕ್​ ಖರೀದಿಸಿದ್ದರು. TS07 GJ1258 ನಂಬರಿನ ಬೈಕ್​ ಆಗಿದ್ದು, ಬರೋಬ್ಬರಿ 18 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ. ಅನಿಲ್​ ಕುಮಾರ್​ ಹೆಸರಿನಲ್ಲಿ ಬೈಕ್​ ಖರೀದಿಸಲಾಗಿದೆ. ಈ ಬೈಕ್​ಗೆ 1160 ಸಿಸಿ ಸಾಮರ್ಥ್ಯವಿದೆ. ಇದು ಹೊಸ ಮಾದರಿಯ ಬೈಕ್​ ಆಗಿದ್ದು, ಸುಮಾರು 228 ಕೆಜಿ ತೂಗುತ್ತದೆ.

ಇನ್ನು ಧರಮ್​ ತೇಜ್​ಗೆ ಬೈಕ್​ ಕ್ರೇಜ್​ ಜಾಸ್ತಿ ಇದೆ. ಶೂಟಿಂಗ್​ ಇಲ್ಲದಿದ್ದಾಗ ಅನೇಕ ಬಾರಿ ಸ್ನೇಹಿತರ ಬೈಕ್​ನಲ್ಲಿಯೂ ಜಾಲಿ ಸವಾರಿ ಮಾಡಿದ್ದಾರೆ. ಶುಕ್ರವಾರ ಗಣೇಶ ಹಬ್ಬವಾದ್ದರಿಂದ ಟ್ರಾಫಿಕ್​ ಇರಲಿಲ್ಲ. ರಸ್ತೆಗಳು ಖಾಲಿಯಿದ್ದದ್ದರಿಂದ ಧರಮ್ ತೇಜ್​ ವೇಗವಾಗಿ ಬೈಕ್​ನಲ್ಲಿ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಬೈಕ್​ ಸ್ಕಿಡ್​ ಆಗಿ ಬಿದ್ದಿದ್ದಾರೆಂದು ತಿಳಿದುಬಂದಿದೆ.

ಘಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹೈದರಾಬಾದ್​ ಪೊಲೀಸರು, ಹೆಲ್ಮೆಟ್​ ಧರಿಸಿದ್ದರಿಂದ ಧರಮ್​ ತೇಜ್​ಗೆ ಹೆಚ್ಚಿನ ಅನಾಹುತ ಆಗಿಲ್ಲ. ಒಂದು ವೇಳೆ ಹಲ್ಮೆಟ್​ ಇರದೇ ಹೋಗಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಇತ್ತು. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದ್ದು, ತಕ್ಷಣ ವಾಹನವನ್ನು ನಿಯಂತ್ರಿಸಲಾಗದೇ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಸದ್ಯ ಸಿಸಿಟಿವಿ ವಿಡಿಯೋಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಹೇಗೆ ಅಪಘಾತ ಸಂಭವಿಸಿತು ಎಂಬುದನ್ನು ಪರಿಶೀಲನೆ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಮರಳು ಇದ್ದಿದ್ದರಿಂದ ಬೈಕ್​ ಸ್ಕಿಡ್​ ಆಯಿತು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಪೊಲೀಸರ ಪ್ರಕಾರ ವೇಗವನ್ನು ನಿಯಂತ್ರಿಸಲಾಗದೆ ಅಪಘಾತ ಸಂಭವಿಸಿದೆ ಎನ್ನುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಂದಹಾಗೆ ಧರಮ್​ ತೇಜ್​, ಮೆಗಾಸ್ಟಾರ್ ಚಿರಂಜೀವಿ ಅವರ ತಂಗಿಯ ಮಗ. ಸದ್ಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಸಾಯಿ ಅವರನ್ನು ನೋಡಲು ನಟ ಚಿರಂಜೀವಿ, ನಟ ಪವನ್ ಕಲ್ಯಾಣ್, ನಟ ವೈಷ್ಣವ ತೇಜ್, ಅಲ್ಲು ಅರವಿಂದ್ ಮತ್ತು ಇತರ ಕುಟುಂಬಸ್ಥರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net